
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಗಿಡಗಳನ್ನು ತಕ್ಷಣ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸೂಚನೆ ನೀಡಿದ್ದಾರೆ.
ಅರಬೈಲ್ ಘಟ್ಟದಲ್ಲಿ ಉಂಟಾದ ಭೂಕುಸಿತ ಹಾಗೂ ಹಾನಿ ಪರಿಶೀಲನೆ ನಡೆಸಿದ ಅವರು ಮೂರು ದಿನಗಳಿಂದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಷ್ಟದಲ್ಲಿರುವ ಜನರು ನಮ್ಮನ್ನು ಶಪಿಸುತ್ತಿದ್ದಾರೆ. ತಕ್ಷಣ ಮರಗಳನ್ನು ತೆರವುಗೊಳಿಸಿ ರಸ್ತೆಯನ್ನು ಖುಲ್ಲಾಗೊಳಿಸಬೇಕು, ಯಂತ್ರಗಳ ಅಗತ್ಯವಿದ್ದರೆ ತಕ್ಷಣವೇ ಪೂರೈಸಲಾಗುವುದು ಇನ್ನು ಮೂರು ದಿನಗಳ ಒಳಗಾಗಿ ಹೆದ್ದಾರಿಯಲ್ಲಿ ಸಂಚಾರ ಪ್ರಾರಂಭವಾಗಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಲೋಕೋಪಯೋಗಿ ಹಾಗೂ ಹೆದ್ದಾರಿ ಇಲಾಖೆಯ ತಂಡವೂ ನಾಳೆ ಸ್ಥಳಕ್ಕೆ ಬರಲಿದ್ದು ಕೂಡಲೇ ಹೆದ್ದಾರಿ ತೆರವು ಕಾರ್ಯ ಪ್ರಾರಂಭಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಸಿ ಆಕೃತಿ ಬನ್ಸಾಲ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.