ಅಂಕೋಲಾ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಲ್ಲೇಶ್ವರ ಗ್ರಾಮದ ಕೆಲ ಮಹಿಳೆಯರು ಸ್ವಯಂಪ್ರೇರಿತರಾಗಿ ಗ್ರಾಮದ ಸ್ವಚ್ಚತಾ ಕಾರ್ಯವನ್ನು ಕೈಗೊಂಡು ಗಮನ ಸೆಳೆದರು.
ಮಳೆಗಾಲ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ನದಿಗೆ ಸೇರಿ ಪ್ರಾಣಿ ಪಕ್ಷಿ ಹಾಗೂ ಪರಿಸರಕ್ಕೆ ಅತೀವ ಹಾನಿಯಾಗುತ್ತಿತ್ತು. ಅಲ್ಲದೇ ಪರಿಸರದ ಕಾಳಜಿ ಜನರಲ್ಲಿ ಇನ್ನೂ ಸ್ಪಷ್ಟವಾಗಿ ಬೇರೂರದ ಕಾರಣ ತಿಂದು ಕಂಡ ಕಂಡಲ್ಲಿ ಎಸೆಯುವ ಮನಸ್ಥಿತಿ ಜನರಲ್ಲಿದೆ. ಎರಡು ವರ್ಷಗಳಿಂದ ಬರುತ್ತಿರುವ ಪ್ರವಾಹದಿಂದ ನದಿ- ಹಳ್ಳಗಳಲ್ಲಿ ಎಲ್ಲೆಲ್ಲಿಂದಲೋ ಬಂದ ಕಸದ ರಾಶಿಗಳು ಊರು ತುಂಬಿಕೊಂಡಿದೆ. ನಿತ್ಯವೂ ರಾಶಿ ರಾಶಿ ಕಸಗಳನ್ನು ಕಲ್ಲೇಶ್ವರ ಸುತ್ತಮುತ್ತಲ ಬೆಟ್ಟದ ತಪ್ಪಲಲ್ಲಿ ತಂದು ಎಸೆಯುತ್ತಿದ್ದು, ಇದು ಮಳೆಗಾಲದಲ್ಲಿ ಮತ್ತೆ ಊರಿಗೆ ಬಂದು ಬೀಳುವುದರಿಂದ ಸಮಸ್ಯೆ ಎದುರಾಗುತ್ತಿದೆ.
ಪ್ರತಿವರ್ಷ ಕಸದಿಂದ ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಇದರಿಂದ ಮುಕ್ತಿ ಕೊಡಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಊರಿನ ಮಹಿಳೆಯರು ಸ್ವಚ್ಚತಾ ಅಭಿಯಾನದ ಕಾರ್ಯಕ್ರಮವನ್ನು ಸ್ಮಿತಾ ರಾಘವೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡು ಊರಿನಲ್ಲಿ ಬಿದ್ದಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್‌ನ್ನು ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ.
ಪ್ರಮುಖರಾದ ಗೀತಾ ಕೋಟೇಮನೆ, ರಂಜಿತಾ ಕೋಟೇಮನೆ, ಮಂಗಳಾ ಪ್ರಸಾದ್, ಭಾವನಾ ಹೆಗಡೆ, ಸುಮನಾ ಹೆಗಡೆ, ಪ್ರಭಾ ಹೆಗಡೆ, ವಿನುತಾ ಹೆಗಡೆ, ಸ್ಮಿತಾ ಭಟ್ ಮತ್ತಿತರರು ಪಾಲ್ಗೊಂಡಿದ್ದರು.