ಭಟ್ಕಳ: ಶ್ರೀಗುರು ಸುಧೀಂದ್ರ ಕಾಲೇಜಿನ ಘಟಕವಾದ ರೋಟರಾಕ್ಟ್ ಕ್ಲಬ್‌ನ ಹಳೆಯ ವಿದ್ಯಾರ್ಥಿ ಹಾಗೂ ರೋಟರಾಕ್ಟ್ ಕ್ಲಬ್‌ನ ಮಾಜಿ ಸದಸ್ಯರ ಪ್ರಾಯೋಜಕತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಯಲ್ಲಿ ಸ್ಥಾಪಿಸಲ್ಪಟ್ಟ ಬೋಲ್ಟ್ ಸಂಸ್ಥೆಯ ಪ್ರಥಮ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಉದ್ಘಾಟಿಸಿದರು.
ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿದ್ದು, ಇವುಗಳು ಮುಂಬರುವ ದಿನಗಳಲ್ಲಿ ವಿಶ್ವವನ್ನೇ ಆಳಲಿವೆ ಎಂದು ಹೇಳಿದರು.ಒಪೆಕ್ ಒಕ್ಕೂಟದ ದೇಶಗಳಲ್ಲಿ ಕಚ್ಚಾ ತೈಲದ ಪ್ರಮಾಣವು ದಿನಕಳೆದಂತೆ ಕಡಿಮೆಯಾಗುತ್ತಿದ್ದು, ಪರ್ಯಾಯ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಬಳಕೆ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಉತ್ತಮ ಕ್ರಮವಾಗಿದೆ ಎಂದರು.
ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡಿ, ಗ್ರೀನ್ ಕ್ಯಾಂಪಸ್ ಯೋಜನೆಯ ಅಡಿಯಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ ರೋಟರಾಕ್ಟ್ ಪ್ರತಿಜ್ಞಾ ವಿಧಿ ಭೋದಿಸಿದರು. ರೋಟರಾಕ್ಟ್ ಅಧ್ಯಕ್ಷ ಪ್ರೇಮಾನಂದ ನಾಯ್ಕ ಸ್ವಾಗತಿಸಿದರು. ರೊಟರಾಕ್ಟರ್ ಪಲ್ಲವಿ ಜೈನ್ ನಿರೂಪಿಸಿದರು ಮತ್ತು ಕಾರ್ಯದರ್ಶಿ ರಶ್ಮಿ ಮಹಾಲೆ ವಂದಿಸಿದರು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಮತ್ತು ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.