ದಾಂಡೇಲಿ: ನಗರ ಹಾಗೂ ನಗರದ ಸುತ್ತಮುತ್ತಲ ಜನತೆಯ ವರ್ಷಗಳ ಬೇಡಿಕೆಯಾದ ಕಾಳಿ ನದಿಯ ಹತ್ತಿರದಲ್ಲಿ ಕ್ರಿಯಾ ಮಂಟಪ ನಿರ್ಮಾಣ ಕಾರ್ಯಕ್ಕೆ ಇದೀಗ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಅಸ್ತು ಎಂದಿದೆ.
ಮೃತರ ಆತ್ಮ ಸದ್ಗತಿಗಾಗಿ ಕ್ರಿಯಾ ಪೂಜಾಧಿ ಕಾರ್ಯಗಳನ್ನು ಮಾಡಲು ದೂರದ ಗೋಕರ್ಣ, ಗೋವಾ ಮೊದಲಾದ ಕಡೆಗಳಿಗೆ ಹೋಗಿ ಸಾವಿರಾರು ರೂಪಾಯಿವರೆಗೆ ವ್ಯಯಿಸಬೇಕಿತ್ತು. ಇತ್ತೀಚಿನ ಕೆಲ ವರ್ಷಗಳವರೆಗೆ ನಗರದ ಕುಳಗಿ ರಸ್ತೆಯ ಶ್ರೀವೀರಾಂಜನೇಯ ದೇವಸ್ಥಾನದ ಪಕ್ಕದ ಕಾಳಿ ನದಿಯ ತಟದಲ್ಲಿ ಕ್ರಿಯಾ ಮಂಟಪ ಇತ್ತಾದರೂ, ಅದು ತುಂಬ ಹಳೆಯದಾಗಿದ್ದರಿಂದ ಮತ್ತು ಈ ಹಿಂದಿನ ಮಳೆಗೆ ಹಾನಿಗೊಳಗಾಗಿ ಉಪಯೋಗಕ್ಕೆ ಬಾರದಂತಾಗಿದೆ.
ಕ್ರಿಯಾ ಮಂಟಪದ ಅನಿವಾರ್ಯತೆ ಮತ್ತು ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಬಗ್ಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಕ್ರಿಯಾ ಮಂಟಪ ನಿರ್ಮಾಣದ ಉದ್ದೇಶವನ್ನು ಕಾಗದ ಕಾರ್ಖಾನೆ ಹೊಂದಿದ್ದು, ಆದಷ್ಟು ಶೀಘ್ರದಲ್ಲಿ ಕಾಗದ ಕಾರ್ಖಾನೆಯ ಸಿಎಸ್‌ಆರ್ ಯೋಜನೆಯಡಿ ಕ್ರಿಯಾ ಮಂಟಪವನ್ನು ನಿರ್ಮಿಸುವ ಭರವಸೆ ನೀಡಿದ್ದಾರೆ.