• first
    second
    third
    previous arrow
    next arrow
  • ಮೀನುಗಾರರ ಅನುದಾನದ ಶೀಘ್ರ ಬಿಡುಗಡೆಗೆ ಮನವಿ

    300x250 AD

    ಅಂಕೋಲಾ: ತಾಲೂಕಿನ ಮೀನುಗಾರರ ಸಹಕಾರಿ ಸಂಘಗಳ ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆಯ ವಂತಿಕೆ ಮತ್ತು ಅನುದಾನ ಹಾಗೂ ಕೋವಿಡ್ ಪರಿಹಾರ ಫಲಾನುಭವಿಗಳಿಗೆ ಬಿಡುಗಡೆಯಾಗದೇ ಇರುವ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಹರಿಹರ ಹರಿಕಾಂತ ಅವರ ನೇತೃತ್ವದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಮುಖಾಂತರ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

    ಮೇ 5ರಂದು ತಾಲೂಕಿನ ಮೀನುಗಾರರ ಸಹಕಾರಿ ಸಂಘಗಳ ಪದಾಧಿಕಾರಿಗಳು ಒಕ್ಕೂಟದ ಮೂಲಕ ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆಯ ವಂತಿಕೆ ಮತ್ತು ಅನುದಾನ ಹಾಗೂ ಕೋವಿಡ್ ಪರಿಹಾರ ಫಲಾನುಭವಿಗಳಿಗೆ ಬಿಡುಗಡೆಯಾಗದೇ ಇರುವ ಕುರಿತು ಶೀಘ್ರ ಬಿಡುಗಡೆಗೊಳಿಸುವಂತೆಯು, ತಪ್ಪಿದ್ದಲ್ಲಿ ಹೋರಾಟದ ಬಗ್ಗೆ ಕುರಿತು ಪತ್ರ ಬರೆದು ವಿನಂತಿಸಲಾಗಿತ್ತು.

    ಅಲ್ಲದೇ ಮೇ 13ರಂದು ಒಕ್ಕೂಟದ ಪದಾಧಿಕಾರಿ ಕಾರವಾರ ಕಚೇರಿಗೆ ಸ್ವತಃ ಭೇಟಿ ಕೊಟ್ಟು ಈ ಕುರಿತು ವಿಚಾರಿಸಿದಾಗ, ಯಾವುದೇ ಪತ್ರ ಅಂಕೋಲಾದಿಂದ ಬಂದಿರುವುದಿಲ್ಲ ಎಂಬ ಮಾಹಿತಿಯನ್ನು ತಮ್ಮ ಕಚೇರಿಯಲ್ಲಿ ನೀಡಿದರು. ತಕ್ಷಣ ಅಂಕೋಲಾ ಕಚೇರಿಗೆ ಈ ಕುರಿತು ಪೋನ್ ಮೂಲಕ ವಿಚಾರಿಸಿದಾಗ ಮೇ 7ರಂದು ಕಾರವಾರ ಜಂಟಿ ನಿರ್ದೇಶಕರ ಕಚೇರಿಗೆ ತಲುಪಿರುವ ಕುರಿತು ಖಾತ್ರಿ ಉತ್ತರ ನೀಡಿದ್ದಾರೆ. ಅದರಂತೆ ಟಪಾಲು ಮತ್ತು ಇನ್‌ವರ್ಡ್ ಪರಿಶೀಲಿಸುವಂತೆ ತಿಳಿಸಿದಾಗ ಟಪಾಲುಗಳ ರಾಶಿಯೇ ಬಿದ್ದಿತ್ತು. ಹೀಗಾಗಿ ಮೇ 7ರಿಂದ ಕಚೇರಿಗೆ ಬಾರದೇ, ಕನಿಷ್ಟ ಪಕ್ಷ ಟಪಾಲನ್ನು ಕೂಡ ಪರಿಶೀಲಿಸದೇ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದೆ. ಪ್ರಭಾರಿಯಾದ ತಾವು ಅತೀ ಹತ್ತಿರದಲ್ಲಿ ಕಚೇರಿಯನ್ನು ಹೊಂದಿದ್ದು, ಒಂದು ವಾರಗಟ್ಟಲೇ ತಾವು ವಹಿಸಿಕೊಂಡ ಪ್ರಭಾರ ಹುದ್ದೆಯ ಕಾರ್ಯವೈಖರಿ ಮೀನುಗಾರರು ಸಹಿಸುವಂಥದ್ದಲ್ಲ. ಇದೇ ಕಾರಣದಿಂದ ಸರಕಾರದ ಯಾವುದೇ ಯೋಜನೆ ಮೀನುಗಾರರ ಕೈ ಸೇರುತ್ತಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲ್ಲ. ಮೀನುಗಾರರು ಅನೇಕ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

    300x250 AD

    ಒಂದು ವಾರದ ಗಡವು ನೀಡಲಾಗಿತ್ತು. ಆದರೆ ನಿಕಟಪೂರ್ವ ಜೆ.ಡಿ.ಯವರು ಫೋನ್ ಮೂಲಕ ಮಾತನಾಡಿ, ಸೌಹಾರ್ದಯುತವಾಗಿ ಬಗೆಹರಿಸಲು ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದಾಗ್ಯೂ ತಮ್ಮ ಅಧಿಕಾರಿಗಳು ಮತ್ತೆ ಅದೇ ರಾಗ, ಅದೇ ಹಾಡು ಎಂಬಂತೆ ಪುನಃ ಫಲಾನುಭವಿಗಳ ಪಟ್ಟಿ ಮತ್ತೆ ಕೇಳುತ್ತಿದ್ದಾರೆ. ಈ ಹಿಂದೆ ಎಷ್ಟೋ ಬಾರಿ ಪಟ್ಟಿ, ಸಿಡಿ, ಇ-ಮೇಲ್ ಮೂಲಕ ನೀಡಲಾಗಿದೆ. ಅದಾಗ್ಯೂ ಎಲ್ಲ ಸಂಘಗಳಿಗೆ ಮತ್ತೇ ಪಟ್ಟಿ ನೀಡಲು ತಿಳಿಸಲಾಗಿದೆ. 2015-16ರಿಂದ ತಪ್ಪಿರುವ ಫಲಾನುಭವಿಗಳ ಪಟ್ಟಿ ಮತ್ತು 2018-19ರಿಂದ 2020-21ರವರೆಗಿನ ಪೂರ್ಣ ಪ್ರಮಾಣದ ಅನುದಾನ ಮತ್ತು ವಂತಿಕೆ ಪಡೆಯದೇ ಇರುವಂತವರ ಖಾತೆಗೆ ಒಂದು ವಾರದೊಳಗೆ ಜಿಲ್ಲೆಯಲ್ಲಿರುವ ಎಲ್ಲ ಸಂಘದ ಫಲಾನುಭವಿಗಳಿಗೆ ಜಮಾ ಮಾಡಿ, ತಪ್ಪಿದವರ ಪಟ್ಟಿಯನ್ನು ಪ್ರತ್ಯೇಕವಾಗಿ 2015-16 ರಿಂದ ಇಲ್ಲಿ 20-21 ರವರೆಗಿನ ಆಯಾ ಸಂಘಗಳಿಗೆ ದೃಢೀಕರಿಸಿ ನೀಡಲು ಕ್ರಮವಹಿಸಬೇಕು. ತಪ್ಪಿದ್ದಲ್ಲಿ ಉಗ್ರ ಹೋರಾಟದ ಕುರಿತು ಯೋಜನೆ ರೂಪಿಸಬೇಕಾಗುತ್ತದೆ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ರಾಜು ಹರಿಕಂತ್ರ ಕಣಗಿಲ, ಮೀನುಗಾರರ ಸಹಕಾರಿ ಸಂಘ ಕಣಗಿಲ, ಮಂಜಗುಣಿ, ಬೆಳಂಬಾರ, ಕೇಣಿ, ಹಿಲ್ಲೂರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಮೀನುಗಾರಿಕೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಮನವಿ ಸ್ವೀಕರಿಸಿದರು.


    Share This
    300x250 AD
    300x250 AD
    300x250 AD
    Back to top