ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಶಾಲೆಯ ಪೂರ್ವ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ಜತೆಗೂಡಿ ವಿಜೃಂಭಣೆಯಿಂದ ನಡೆಸಿಕೊಟ್ಟಿತು.
ರಾಜ್ಯಮಟ್ಟದಲ್ಲಿ ಟಾಪ್ ಟೆನ್ ಸ್ಥಾನ ಪಡೆದ ಆಂಗ್ಲ ಮಾಧ್ಯಮದ ನಾಲ್ವರು ವಿದ್ಯಾರ್ಥಿಗಳೂ ಸೇರಿ ಶೇ 90ಕ್ಕಿಂತ ಅಧಿಕ ಅಂಕಗಳನ್ನು 33 ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮದ 10 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸತತವಾಗಿ ಶೇ 100 ಫಲಿತಾಂಶ ದಾಖಲಿಸುತ್ತಿರುವ ಸಂಸ್ಥೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.ಕನ್ನಡ ಮಾಧ್ಯಮದ ರಕ್ಷಾ ನಾಯ್ಕ, ಆಂಗ್ಲ ಮಾಧ್ಯಮದಲ್ಲಿ ಸುಜನ್ ಭಂಡಾರಿ 625ಕ್ಕೆ 620 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರು.
ಹಿರಿಯ ವ್ಯೆದ್ಯ ಜಿ.ಜಿ.ಹೆಗಡೆಯವರು ಪ್ರತಿಭೆಗಳನ್ನು ಸನ್ಮಾನಿಸಿ ಮಾತನಾಡಿ, ನಿಸ್ವಾರ್ಥ ಆಡಳಿತ ಮಂಡಳಿ, ಮಕ್ಕಳನ್ನು ದೇವರಂತೆ ಕಾಣುವ ಶಿಕ್ಷಕ ವರ್ಗ ಹಾಗೂ ಸ್ಪಂದಿಸುವ ಪಾಲಕ ವರ್ಗವಿದ್ದರೆ ಸಂಸ್ಥೆಯು ಯಶಸ್ಸು ಗಳಿಸಲು ಸುಲಭ ಸಾಧ್ಯವೆಂದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಮ್.ಹೆಗಡೆ ಶಾಲೆಯ ನಿರಂತರ ಸಾಧನೆಯನ್ನು ಪ್ರಶಂಸಿಸಿ, ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಕರೆಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಘುನಾಥ ಪೈ ವಹಿಸಿದ್ದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಕಾಮತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಜಯಂತ ನಾಯಕ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕ ಎಲ್.ಜಿ.ಭಟ್ಟ ಪ್ರಶಸ್ತಿಗಳನ್ನು ಸಾದರಪಡಿಸಿದರು.ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಾಧ್ಯಾಪಕಿ ಕಮಲಾ ನಾಯಕ ವಂದಿಸಿದರು. ಸನ್ಮಾನಿತರ ಮುಖದಲ್ಲಿ ಸಾಧನೆಗೆ ಫಲ ಸಿಕ್ಕ ಸಂತೃಪ್ತಿ ಎದ್ದು ಕಾಣುತ್ತಿತ್ತು. ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಲೆಯ ಎಲ್ಲಾ 10ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.ಪಾಲಕರ ಪರವಾಗಿ ಶಾಲೆಯ ಪೂರ್ವ ವಿದ್ಯಾರ್ಥಿಯೂ ಆಗಿರುವ ಡಾ.ಪ್ರಮೋದ ಫಾಯ್ದೆ ಮಾತನಾಡಿ ಶಾಲೆಯ ಅಭಿವೃದ್ಧಿಯನ್ನು ಪ್ರಶಂಸಿಸಿ, ಇನ್ನಷ್ಟು ಅಭಿವೃದ್ಧಿಗೆ ಸಹಾಯ ಹಸ್ತ ನಿಡುವುದಾಗಿ ಭರವಸೆ ನೀಡಿದರು.