ಸಿದ್ದಾಪುರ: ಲಯನ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಕಸಿ ತರಬೇತಿ ಕಾರ್ಯಾಗಾರವನ್ನು ಲಯನ್ಸ್ ಹಿಂದಿನ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ ಉದ್ಘಾಟಿಸಿದರು. ನಂತರ ಮಾತನಾಡಿ ಮಹಿಳೆಯರು ತರಬೇತಿಗಳನ್ನು ಪಡೆದು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಹೇಳಿದರು.
ಕೃಷಿ ಪ್ರಶಸ್ತಿ ವಿಜೇತ ಮಹಿಳೆ ಮಧುಮತಿ ಶೀಗೇಹಳ್ಳಿ, ಮಹಿಳೆಯರು ಲಾಭದಾಯಕ ಕೃಷಿ ತರಬೇತಿ ಪಡೆಯಬೇಕು. ಮುಂದಿನ ದಿನಗಳಲ್ಲಿ ಕೃಷಿಮೇಳ, ಡೇರೆಮೇಳಗಳು ನಮ್ಮೂರಿನಲ್ಲಿಯೂ ನಡೆಯುವಂತೆ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಹೂವಿನಮನೆ ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಸೌಮ್ಯ ಮಾಲಾ ಗುಲಾಬಿ, ದಾಸವಾಳ, ಮಾವು, ಗೇರು, ಕಾಳುಮೆಣಸು ಗಿಡಗಳಿಗೆ ಮಾಡುವ ವಿವಿಧ ಕಸಿ ವಿಧಾನವನ್ನು ಮಾಡಿ ತೋರಿಸಿದ್ದಲ್ಲದೇ, ಇಂತಹ ತರಬೇತಿಯನ್ನು ಪಡೆದರೆ ಆದಾಯ ಗಳಿಕೆಯ ಜೊತೆ ಆರೋಗ್ಯವಂತರಾಗಿಯೂ ಇರಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಮಹಿಳೆಯರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.