ಕಾರವಾರ: ಕಳೆದ ಬಾರಿ ಪ್ರವಾಹದಿಂದ ತೊಂದರೆಗೊಳಗಾದ ಕಾಳಿನದಿ ದಂಡೆ ಮೇಲಿರುವ ಕೆಲ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮುಂಗಾರು ಸಿದ್ಧತೆಯನ್ನು ಪರಿಶೀಲಿಸಿದರು.
ತಾಲೂಕಿನ ಕಾಳಿ ನದಿ ದಂಡೆಯ ಮೇಲೆ ನೆಲೆಸಿರುವ ಹಾಗೂ ಪ್ರವಾಹ ಸಂಭವಿಸಬಹುದಾದ ಗೋಪಶಿಟ್ಟಾ, ಘಾಡಸಾಯಿ, ಧೋಲ, ಉಳಗಾ, ಸೀನ್ ಗುಡ್ಡಾ (ಭೈರೆ), ಗೋಟೆಗಾಳಿ, ಕದ್ರಾ, ಮಲ್ಲಾಪುರ, ಕೆರವಡಿ, ವೈಲವಾಡಾ, ಕಿನ್ನರ ಗ್ರಾಮಗಳಿಗೆ ಭೇಟಿ ನೀಡಿ ಮುಂಗಾರು ಸಿದ್ಧತೆಯನ್ನು ಪರಿಶೀಲಿಸಿದರು. ಬಳಿಕ ಕದ್ರಾದಲ್ಲಿರುವ ಕೆಪಿಸಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮುಂಗಾರು ಪೂರ್ವ ಸಿದ್ಧತೆ ಸಭೆಯಲ್ಲಿ ಭಾಗವಹಿಸಿ ಪ್ರಸ್ತುತ ವರ್ಷ ಪ್ರವಾಹದ ಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಅನುಸರಿಸಬೇಕಾದ ನೀತಿ, ಯೋಜನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮತ್ತು ಕ್ಷೇತ್ರ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ನೋಡಲ್ ಅಧಿಕಾರಿಗಳು ತಮಗೆ ನಿಗದಿ ಪಡಿಸಿದ ಕಾರ್ಯವ್ಯಾಪ್ತಿಯ ಯಾವತ್ತೂ ಪ್ರಕೃತಿ ವಿಕೋಪಕ್ಕೆ ಸೂಕ್ಷ್ಮವಾದ ಸ್ಥಳಗಳಿಗೆ ಭೇಟಿ ನೀಡಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಚರಣೆ ಮತ್ತು ಪುನರ್ವಸತಿ ಬಗ್ಗೆ ವಾಸ್ತವಿಕ ಕ್ರಿಯಾ ಯೋಜನೆಯನ್ನು ಮುಂದಿನ ಮೂರು ದಿನಗಳ ಒಳಗಾಗಿ ರೂಪಿಸುವಂತೆ ಸೂಚಿಸಿದರು.
ಕೆಪಿಸಿ ಇಲಾಖೆಯವರು ಜಲಾಶಯದಿಂದ ಬಿಡುಗಡೆ ಮಾಡಲಾಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಮುಳುಗಡೆಗೊಳ್ಳುವ ಪ್ರದೇಶಗಳನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಿ, ಸದರಿ ವಲಯಗಳ ಗಡಿಯಲ್ಲಿ ಬಿಳಿ(80,000 ಕ್ಯೂಸೆಕ್ಸ್), ಹಸಿರು(1,50 ಲಕ್ಷ ಕ್ಯೂಸೆಕ್ಸ್), ಮತ್ತು ನೀಲಿ 2,00 ಲಕ್ಷ ಕ್ಯೂಸೆಕ್ಸ್), ಬಣ್ಣಗಳ ಕಾಂಕ್ರಿಟ್ ಫ್ಲ್ಯಾಬ್‌ಗಳನ್ನು ಅಳವಡಿಸುತ್ತಿರುವ ಕ್ರಮವನ್ನು ಶ್ಲಾಘಿಸಿದರು. ಈ ಸೂಚನಾ ಫಲಕಗಳನ್ನು ಅಳವಡಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು. ಅಲ್ಲದೇ ಪ್ರಸ್ತುತ ವರ್ಷ ಎಸ್‌ಎಂಎಸ್ ಮೂಲಕ ಜಲಾಶಯದ ನೀರು ಬಿಡುಗಡೆ ಪೂರ್ವದಲ್ಲಿ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಲು ಕ್ರಮ ಜರುಗಿಸಲಾಗುವುದು ಎಂದರು.