ದಾಂಡೇಲಿ :ನಗರದ ಹಿರಿಯ ನಾಗರಿಕರ ವೇದಿಕೆಯು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್ ಹೇಳಿದರು.
ನಗರದ ಹಿರಿಯ ನಾಗರಿಕರ ವೇದಿಕೆಯ 22ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯು ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿ, 22 ವರ್ಷಗಳಿಂದ ಸಂಘ ಮುನ್ನಡೆದು ಬಂದಿರುವುದು ಮಹತ್ವದ ಸಾಧನೆ. ನಿರ್ದಿಷ್ಟವಾದ ಉದ್ದೇಶದೊಂದಿಗೆ ಆರಂಭಗೊಂಡ ಈ ಸಂಘಟನೆಯು ತನ್ನ ಮೂಲ ಉದ್ದೇಶದ ಪರಿಕಲ್ಪನೆಯಡಿ ಜನಮುಖಿಯಾಗಿ ಬೆಳೆದು ನಿಂತಿರುವುದು ಸಂಘದ ಬಹುದೊಡ್ಡ ಸಾಧನೆ ಎಂದು ಬಣ್ಣಿಸಿದರು. ಸಂಘವು ಇನ್ನೂ ಉತ್ತರೋತ್ತರ ಪ್ರಗತಿ ಸಾಧಿಸಿ, ಹಿರಿಯ ನಾಗರಿಕರಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಈ ಸಂಘದಿಂದ ನಡೆಯಲೆಂದು ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ವಿ.ಎ.ಕೋನಾಪುರಿ, ಸಂಘದ ಸರ್ವ ಪದಾಧಿಕಾರಿಗಳ ಮತ್ತು ಸದಸ್ಯರುಗಳ ಸರ್ವ ಸಹಕಾರದಲ್ಲಿ ಹಿರಿಯ ನಾಗರಿಕರ ವೇದಿಕೆಯು ನಗರದ ಪ್ರಮುಖ ಸಂಘಟನೆಯಾಗಿ ಬೆಳೆಯುವಂತಾಗಿದೆ. ಸಾಮಾಜಿಕ ಸಮಸ್ಯೆಗಳ ಕುರಿತಂತೆ ಹಾಗೂ ಬೇಡಿಕೆಗಳ ಕುರಿತಂತೆ ಹಿರಿಯ ನಾಗರಿಕರ ವೇದಿಕೆಯಿಂದ ನೀಡಲಾಗುವ ಮನವಿಗೆ ನಗರ ಸಭೆಯು ವಿಶೇಷ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳುತ್ತಿದೆ. ನಮ್ಮ ಬದುಕು ಸಮಾಜಮುಖಿಯಾದ ಬದುಕಾಗಬೇಕು. ಆ ದಿಸೆಯಲ್ಲಿ ನಮ್ಮನ್ನು ನಾವು ಹಿರಿಯರ ನಾಗರಿಕರ ವೇದಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಸಂಘದ ಶ್ರೇಯೋಭಿವೃದ್ಧಿಗೆ ಸರ್ವರ ಸಹಕಾರವಿರಲಿ ಎಂದರು.
ಹಿರಿಯ ನಾಗರಿಕರ ವೇದಿಕೆಯಿಂದ ಪೌರಾಯುಕ್ತರಿಗೆ ಸನ್ಮಾನಿಸುವ ಕಾರ್ಯಕ್ರಮವಿತ್ತಾದರೂ, ಆ ಸನ್ಮಾನವನ್ನು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ವಿ.ಎ.ಕೋನಾಪುರಿಯವರಿಗೆ ಮಾಡುವುದರ ಮೂಲಕ ಪೌರಾಯುಕ್ತರು ಗಮನ ಸೆಳೆದರು.
ವೇದಿಕೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಗುರುಬಸಪ್ಪ ಕವಲಕೊಂಡ, ಖಜಾಂಚಿ ಡಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷ ಎಸ್.ವೈ.ಹಾದಿಮನಿಯವರು ಸಂಘದ ಕಾರ್ಯವೈಖರಿ, ಬೆಳೆದು ಬಂದ ಹಾದಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಗುರುಬಸಪ್ಪ ಕವಲಕೊಂಡ ವರದಿ ವಾಚಿಸಿದರು. ಲಾರೆನ್ಸ್ ಡಿಸೋಜಾ ವಂದಿಸಿದರು. ಪಿ.ವಿ.ಹೆಗಡೆ ಮತ್ತು ಎಂ.ಆರ್.ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.