ಶಿರಸಿ: ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ಎಲ್ಲೆಂದೆರಲ್ಲಿ ವಿದ್ಯಾರ್ಥಿಗಳ ಓಡಾಟ ಕಂಡುಬಂದಿದ್ದು ಎಲ್ಲಾ ವಿದ್ಯಾರ್ಥಿನಿಯರು ಲಗುಬಗೆಯಿಂದ ತಾವು ತಂದ ಆಹಾರವನ್ನು ಮಳಿಗೆಯಲ್ಲಿಟ್ಟು ರುಚಿ ಸವಿಸಲು ಕಾದು ನಿಂತಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಭೂಮಿಕಾ ವಿಭಾಗವು ಮನೆಯಿಂದಲೇ ತಯಾರಿಸಿಕೊಂಡು ಬಂದ ಆಹಾರ ಪ್ರದರ್ಶನ ಮತ್ತು ಮಾರಾಟದ ಮೇಳವನ್ನು ಜೂ.3ರಂದು ಕಾಲೇಜಿನಲ್ಲಿ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ 26 ಮಳಿಗೆಗಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಪ್ರದರ್ಶಿಸಲಾಯಿತು. ಕಾಲೇಜಿನ ಉಳಿದ ವಿದ್ಯಾರ್ಥಿಗಳು, ಪ್ರಾದ್ಯಾಪಕರು ಆಹಾರವನ್ನು ಖರೀದಿಸಿ ರುಚಿಯನ್ನು ಸವಿದರು.ಎಲ್ಲಾ ತರಗತಿಯ ವಿದ್ಯಾರ್ಥಿಗಳ ಗುಂಪು ಸಕ್ರಿಯವಾಗಿ ಪಾಲ್ಗೊಂಡಿತ್ತು. ಹಲಸಿನಹಣ್ಣಿನ ಕಡುಬು, ಮಗೆಕಾಯಿ ಕಡುಬು, ಕಾಯಿ ಕಡುಬು, ಜೋಳದ ರೊಟ್ಟಿ, ಎಣ್ಣೆಗಾಯೀ ಪಲ್ಯ ಹೀಗೆ ಹಲವಾರು ದೇಶಿ ಶೈಲಿಯ ಖಾದ್ಯಗಳು ಜೊತೆಗೆ ಪಾನೀ ಪುರಿ, ಮಸಾಲಾ ಮಜ್ಜಿಗೆ, ತಂಪು ಪಾನೀಯಗಳು, ದೂದ ಪೇಡ, ಗಜರಿ ಹಲ್ವ ಹೀಗೇ ಇನ್ನಿತರ ಖಾದ್ಯಗಳು ಕಣ್ಸೆಳೆದವು. ಈ ಕಾರ್ಯಕ್ರಮದ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ಆಹಾರದ ಸಂಸ್ಕೃತಿ ಬೆಳೆಸುವುದು, ಸ್ವಾವಲಂಬಿ ಜೀವನ ನಡೆಸಲು ಮಾರ್ಗದರ್ಶಿಸುವುದು, ಹಾಗೇಯೆ ವಿದ್ಯಾರ್ಥಿನಿಯರಲ್ಲಿ ವ್ಯಾಪಾರ ಕೌಶಲ್ಯವನ್ನು ವೃದ್ಧಿಸಲೆಂದು ಈ ಮೇಳವನ್ನು ಆಯೋಜಿಸಲಾಗಿತ್ತು.
ಈ ಮೇಳದಲ್ಲಿ ಎಂ ಇ ಎಸ್ ಅಧ್ಯಕ್ಷರಾದ ಜಿ, ಎಂ ಹೆಗಡೆ ಮುಳಖಂಡ, ಉಪ ಸಮಿತಿ ಸದಸ್ಯರಾದ ಲೋಕೇಶ್ ಹೆಗಡೆ, ಪ್ರಾಚಾರ್ಯರಾದ ಡಾ. ಟಿ ಎಸ್ ಹಳೆಮನೆ ಹಾಗೂ ಭೂಮಿಕಾದ ಸಂಚಾಲಕರಾದ ಪ್ರೊ ಶೈಲಜಾ ಭಟ್ಟ ಸಿಬ್ಬಂದಿಗಳು ಉಪಸ್ಥಿತರಿದ್ದರು.