ಮಂಡ್ಯ: ಆಧಾರ್ ಕಾರ್ಡ್ ಮಾಡಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದ ಮಂಡ್ಯದ ವಿಶೇಷ ಚೇತನ ಯುವಕನ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿಯವರ ಕಾರಣದಿಂದ ಬಗೆಹರಿದಿದೆ.
ಮಂಡ್ಯದ ತಂಡಸನಹಳ್ಳಿ ಗ್ರಾಮದ ನೂತನ್ ಎಂಬುವವರು ಹುಟ್ಟಿನಿಂದಲೇ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದಾರೆ. ವಿಕಲಾಂಗತೆಯೂ ಅವರನ್ನು ಕಾಡುತ್ತಿದೆ.
ಈ ಹಿಂದೆ ಭಾವಚಿತ್ರದ ಆಧಾರದ ಮೇಲೆ ಅಧಿಕಾರಿಗಳು ನೂತನ್‌ಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದರು. ಹೀಗಾಗಿ ಪಿಂಚಣಿ ಹಣ ಮತ್ತು ಇತರ ಸರ್ಕಾರಿ ಸವಲತ್ತುಗಳು ದೊರೆಯುತ್ತಿದ್ದವು. ಆದರೆ ಕಳೆದ ಎರಡೂವರೆ ವರ್ಷದ ಹಿಂದೆ ಇವರಿಗೆ ಬರುತ್ತಿದ್ದ ಪಿಂಚಣಿ ಹಾಗೂ ಸರ್ಕಾರಿ ಸವಲತ್ತುಗಳು ನಿಂತು ಹೋಗಿವೆ. ಈ ಬಗ್ಗೆ ವಿಚಾರಿಸಿದಾಗ, ಅವರ ಆಧಾರ್ ಕಾರ್ಡ್ ಬ್ಲಾಕ್ ಆಗಿದೆ ಎಂಬ ಮಾಹಿತಿ ದೊರೆತಿದೆ.
ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಸಲು ಹೋದರೆ ನೂತನ್ ಅವರ ಹೆಬ್ಬರಳು, ಕಣ್ಣುಗಳ ಸ್ಕ್ಯಾನ್ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಆಧಾರ್ ಕಾರ್ಡ್ ಮತ್ತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ರಾಜಕಾರಣಿಗಳನ್ನು ಭೇಟಿಯಾಗಿ ಕಷ್ಟ ತೋಡಿಕೊಂಡರೂ ಸಮಸ್ಯೆ ಬಗೆಹರಿದಿರಲಿಲ್ಲ. ನಂತರ ರೈತ ಮುಖಂಡ ಮಧುಚಂದನ್ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.
ಕೂಡಲೇ ಅವರು ಈ ಸಮಸ್ಯೆ ಬಗ್ಗೆ ಪಿಎಂಒ ಕಛೇರಿ ಮತ್ತು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ. ಇದರಿಂದ ಎರಡು ವರ್ಷಗಳ ಸಮಸ್ಯೆ ಎರಡೇ ದಿನಕ್ಕೆ ಬಗೆಹರಿದಿದೆ. ನೂತನ್ ಅವರಿಗೆ ಆಧಾರ್ ಸಿಕ್ಕಿದೆ.
ಕೃಪೆ- news13.in