ನವದೆಹಲಿ: ಗ್ಯಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಒಮ್ಮತದಿಂದ ವಿಷಯವನ್ನು ಇತ್ಯರ್ಥಪಡಿಸುವ ದಾರಿ ಹುಡುಕಬೇಕು ಎಂದಿದ್ದಾರೆ.
ನಾಗ್ಪುರದಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೆಸ್ಸೆಸ್ ಯಾವುದೇ ವಿಧವಾದ ಆರಾಧನೆಗೆ ವಿರುದ್ಧವಾಗಿಲ್ಲ ಎಂದಿದ್ದಾರೆ.
“ಗ್ಯಾನವಾಪಿ ವಿವಾದ ನಡೆಯುತ್ತಿದೆ. ಇತಿಹಾಸವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಇಂದಿನ ಹಿಂದುಗಳಾಗಲಿ ಅಥವಾ ಮುಸ್ಲಿಮರಾಗಲಿ ಇದನ್ನು ಸೃಷ್ಟಿ ಮಾಡಿಲ್ಲ. ಈ ಘಟನೆ ಆಗಿನ ಕಾಲದಲ್ಲಿ ನಡೆದಿದೆ. ದಾಳಿಗಳ ಮೂಲಕ ಇಸ್ಲಾಂ ಹೊರಗಿನಿಂದ ಭಾರತಕ್ಕೆ ಬಂದಿದೆ. ದಾಳಿಗಳ ಸಂದರ್ಭದಲ್ಲಿ ಭಾರತೀಯರ ನೈತಿಕ ಸ್ಥೈರ್ಯ ಅಡಗಿಸಲು ದೇವಸ್ಥಾನಗಳನ್ನು ನಾಶ ಮಾಡಲಾಯಿತು” ಎಂದಿದ್ದಾರೆ.
“ಕೆಲವು ಸ್ಥಳಗಳ ಬಗ್ಗೆ ನಮಗೆ ವಿಶೇಷ ಭಕ್ತಿ ಇದೆ ಮತ್ತು ಅವುಗಳ ಬಗ್ಗೆ ನಾವು ಮಾತನಾಡಿದ್ದೇವೆ ಕೂಡ, ಆದರೆ ದಿನಕ್ಕೊಂದು ಹೊಸ ವಿಷಯಗಳನ್ನು ತರುವುದು ಬೇಡ. ಸುಖಾಸುಮ್ಮನೆ ವಿವಾದ ಸೃಷ್ಟಿ ಮಾಡುವುದು ಯಾಕೆ? ಗ್ಯಾನವಾಪಿ ಬಗ್ಗೆ ನಮಗೆ ಶ್ರದ್ಧಾಭಕ್ತಿ ಇದೆ ಮತ್ತು ಆ ನಿಟ್ಟಿನಲ್ಲಿ ಏನಾದರೂ ಮಾಡುವುದು ಸರಿಯಾದುದೇ ಆಗಿದೆ. ಆದರೆ ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವುದು ಯಾಕೆ?” ಎಂದಿದ್ದಾರೆ.
ನ್ಯಾಯಾಲಯಗಳು ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಕೃಪೆ- news13.in