ಯಲ್ಲಾಪುರ: ಸಾರ್ವತ್ರಿಕ ಚುನಾವಣೆ ಹೇಗಿರುತ್ತದೆ? ಗುಪ್ತ ಮತದಾನ ಹೇಗಿರಬೇಕು? ಮತಗಟ್ಟೆಯ ಅಧಿಕಾರಿಗಳ ಕರ್ತವ್ಯಗಳೇನು? ದುರ್ಬಲ,ಅಂಧ ಮತದಾರರು ಬಂದಾಗ ಏನು ಮಾಡಬೇಕು? ಮತಪತ್ರದಲ್ಲಿ ನಮೂದಿತ ಉಮೇದುವಾರರ ಹೆಸರಿನ ಮುಂದೆ ತಪ್ಪಾಗದಂತೆ ಮುದ್ರೆ ಒತ್ತುವುದು ಹೇಗೆ? ಮತದಾನ ಮಾಡಿದ ಮತದಾರರ ಕೈಬೆರಳಿಗೆ ಗುರುತು ಹಾಕುವುದು ಏಕೆ? ಇತ್ಯಾದಿ ಎಲ್ಲ ಪ್ರಶ್ನೆಗಳಿಗೆ ಬಿಸಗೋಡ ಪ್ರೌಢಶಾಲಾ ಮಕ್ಕಳು ಇಂದು ಸ್ವತಃ ಮತ ಚಲಾಯಿಸಿ ಉತ್ತರ ಪಡೆದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಇರುವ ಮಹತ್ವ ಹಾಗೂ ಮತಗಟ್ಟೆಯು ಹೇಗಿರಬೇಕು? ಮತದಾನ ಪ್ರಕ್ರಿಯೆ ಹೇಗೆ ನಡೆಯಬೇಕೆಂಬುದರ ಬಗ್ಗೆ ಶಾಲಾ ಸಂಸತ್ ಚುನಾವಣೆ ಆಯೋಜಿಸುವುದರ ಮೂಲಕ ಮನವರಿಕೆ ಮಾಡಿಕೊಡಲಾಯಿತು. ಚುನಾವಣಾ ಪೂರ್ವದಲ್ಲಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಅರ್ಜಿ ಸಲ್ಲಿಕೆ, ಹಿಂಪಡೆಯುವಿಕೆ, ಪ್ರಚಾರ ಮುಂತಾದ ಚಟುವಟಿಕೆಗಳೂ ಇದ್ದವು.
ಅದೇ ದಿನ ಮಧ್ಯಾಹ್ನ ಎಣಿಕೆ ಕಾರ್ಯ ನಡೆದು ಗರಿಷ್ಠ ಮತಪಡೆದ ಹತ್ತು ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಮುಂದೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಮುಖ್ಯಾಧ್ಯಾಪಕ ಎಮ್. ಆರ್. ನಾಯಕ ಹಾಗೂ ಶಿಕ್ಷಕ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಚುನಾವಣೆ ಸಂಘಟಿಸಿದ್ದರು.