• first
  second
  third
  previous arrow
  next arrow
 • ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ಸಾಧನೆ ಸಾಧ್ಯ: ಮುಲ್ಲೈ ಮುಗಿಲನ್

  300x250 AD

  ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ವತಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಅಭ್ಯರ್ಥಿಗಳಿಗೆ ಗುರುವಾರ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸಿದರು.

  ನಂತರ ಮಾತನಾಡಿದ ಅವರು ಪರಿಶ್ರಮ, ಗಹನ ಚಿಂತನೆ, ಆತ್ಮವಿಶ್ವಾಸ, ನಿರಂತರ ಓದು, ಸತತ ಪ್ರಯತ್ನದಿಂದ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
  ದೇಶದ ಸೇವೆ ಮಾಡುವುದು ಹೆಮ್ಮೆಯ ವಿಚಾರವಾಗಿದೆ. ಅಂತಹ ಸೇವೆ ಮಾಡಲು ಸ್ಫೂರ್ತಿ ತುಂಬುವಂತಹ ನಂಬಿಕೆಯ ಜ್ಯೋತಿಯನ್ನು ಬೆಳಗಿಸಿದಂತಹ ಸಾಧನೆ ದೀಪಕ್ ಶೇಟ್ ಹಾಗೂ ಮನೋಜ್ ಹೆಗಡೆಯವರದ್ದಾಗಿದೆ ಎಂದು ಯುಪಿಎಸ್ಸಿ ಸಾಧಕರಿಬ್ಬರನ್ನೂ ವೇದಿಕೆಯಲ್ಲಿ ಪ್ರಶಂಸಿಸಿದರು.

  ಸಾಧನೆಗೆ ಯಾವುದೂ ಅಡ್ಡಿಯಲ್ಲ. ಆತ್ಮವಿಶ್ವಾಸ, ಆಳವಾದ ಚಿಂತನೆ, ಅಧ್ಯಯನ, ಕಠಿಣ ಪರಿಶ್ರಮ ನಿರಂತರ ಓದು ಸಾಧನೆಗೆ ರಹದಾರಿಯಾಗಿದೆ. ಪ್ರತಿಯೊಬ್ಬರು ಜಿಲ್ಲೆಯ ಕೀರ್ತಿ ಹೆಚ್ಚಿಸುವಂತ ಸಾಧನೆ ಮಾಡವಂತಾಗಲಿ ಎಂದು ಹೇಳಿದರು.

  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಮಾತನಾಡಿ, ಪ್ರಯತ್ನಿಸಿ ಸೋಲುವುದು ಸೋಲಲ್ಲ. ಪ್ರಯತ್ನಿಸದೇ ಇರುವುದು ನಿಜವಾದ ಸೋಲು. ಹಾಗಾಗಿ ಪ್ರತಿಯೊಬ್ಬರು ದೇಶದ ಸೇವೆಗಾಗಿ ತಮ್ಮ ಸಮಯವನ್ನು ನೀಡುವುದು ಮುಖ್ಯವಾದುದಾಗಿದೆ ಎಂದು ಹೇಳಿದರು.

  300x250 AD

  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಮಾತನಾಡಿ, ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಿ ನನ್ನಿಂದಲೂ ಸಮಾಜಕ್ಕೆ ಏನಾದರೂ ಸೇವೆ ಮಾಡಲು ಸಾಧ್ಯವೆಂಬುದನ್ನು ಅರಿತು ಕಾರ್ಯ ಪ್ರವೃತ್ತರಾದಾಗ ಸಾಧನೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಂದಲೂ ಕಲಿಯುವುದು ಸಾಕಷ್ಟಿರುತ್ತದೆ. ಸಾಧಕರ ಸಾಧನೆಯಿಂದ ಸ್ಪೂರ್ತಿ ಪಡೆದು ಇನ್ನಷ್ಟು ಸಾಧಕರು ಜಿಲ್ಲೆಯಿಂದ ದೇಶಸೇವೆಗೆ ಬರುವಂತಾಗಲಿ ಎಂದು ಹೇಳಿದರು.

  ಯುಪಿಎಸ್‌ಸಿ ಸಾಧಕ ಮನೋಜ್ ಹೆಗಡೆ ಮಾತನಾಡಿ, ಮನುಷ್ಯನಿಗೆ ಅಸಾಧ್ಯವಾದುದು ಯಾವುದು ಇಲ್ಲ. ವಿದ್ಯಾರ್ಥಿಗಳು ಜ್ಞಾನವನ್ನು ಗಳಿಸಿಕೊಳ್ಳುವತ್ತ ಗಮನ ವಹಿಸಬೇಕು. ಪದವಿ ವಿದ್ಯಾರ್ಥಿಗಳಾದ ತಾವು ಹೆಚ್ಚೆಚ್ಚು ಪರೀಕ್ಷೆಗಳನ್ನು ಎದುರಿಸಬೇಕು. ಅಂತಹ ಉತ್ಸುಕತೆ ನಿಮ್ಮಲ್ಲಿ ಬಂದಾಗ ಸಾಧನೆ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ಯಾಮಲಾ ಸಿ.ಕೆ., ಸೋನಲ್ ಐಗಳ್, ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿದ್ಯಾ ನಾಯಕ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.


  Share This
  300x250 AD
  300x250 AD
  300x250 AD
  Back to top