ದಾಂಡೇಲಿ:ದಿನದ ಹದಿನೆಂಟು ತಾಸಿಗಿಂತಲೂ ಅಧಿಕ ಕಾಲ ಶಾಲೆಗಾಗಿ ತನ್ನನ್ನು ತಾನು ಸಮರ್ಪಣಾಭಾವದಿಂದ ಸಮರ್ಪಿಸಿಕೊಂಡು, ನೇರ ಮಾತು, ಶಿಸ್ತು, ಪ್ರಾಮಾಣಿಕತೆ, ಕ್ರಿಯಾಶೀಲತೆ, ಉತ್ತಮ ಸಂವಹನ ಕಲೆ ಇವೆಲ್ಲವುಗಳನ್ನು ಇವರು ಆಸ್ತಿಯನ್ನಾಗಿಸಿಕೊಂಡಿದ್ದ ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದ ಸಿಸ್ಟರ್ ಸುಹಾಸಿನಿಯವರು ನಿವೃತ್ತಿ ಹೊಂದಿದ್ದಾರೆ.
ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ನಿವೃತ್ತಿಗೊಂಡ ಇವರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಗದಗ ಜಿಲ್ಲೆಯಲ್ಲಿರುವ ಲೊಯೊಲಾ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆ ಶಿಸ್ತು ಮತ್ತು ಕಲಿಕೆಗೆ ಹೆಸರುವಾಸಿಯಾದ ಶಾಲೆಯ ಮುಖ್ಯೋಪಾಧ್ಯಯಿನಿಯಾಗಿ ಬಂದ ಸಿಸ್ಟರ್ ಸುಹಾಸಿನಿಯವರು ಶಾಲೆಯ ಸಮಗ್ರ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡ ಪರಿಯಂತೂ ಸ್ಮರಣೀಯ. ಆ ಕಾರಣಕ್ಕಾಗಿಯೇ ನಿವೃತ್ತಿಗೊಂಡರೂ ಸಂಸ್ಥೆ ಮಾತ್ರ ಬಿಡದೇ ಅವರ ಸೇವೆಯನ್ನು ಮುಂದುವರೆಸುತ್ತಿರುವುದು ಅವರ ಶೈಕ್ಷಣಿಕ ಶ್ರಮ ಸಾಧನೆಗೆ ಸಂದ ಗೌರವ ಎಂದೇ ಹೇಳಬಹುದು.
ಮಿಲಿಟ್ರಿ ಸಿಸ್ಟಂನಂತಿರುವ ವ್ಯಕ್ತಿತ್ವದ ಸಿಸ್ಟರ್ ಸುಹಾಸಿನಿಯವರು ದೂರದ ಮಂಗಳೂರು ತಾಲ್ಲೂಕಿನ ಕಿನ್ನಿಗೋಳಿ ಹತ್ತಿರ ಬಳ್ಕುಂಜೆ ಎಂಬ ಪುಟ್ಟ ಗ್ರಾಮದವರು. ಎಳೆಯ ಪ್ರಾಯದಲ್ಲೆ ಸಾಮಾಜಿಕ ಕಾಳಜಿ ತನ್ನ ಕುಟುಂಬದಿಂದ ಬಂದ ಬಳುವಳಿ ಎನ್ನಬಹುದು. ತನ್ನ ವಿದ್ಯಾರ್ಥಿ ಜೀವನದಲ್ಲಿ ಆಟ-ಪಾಠ ಯಾವ ಸ್ಪರ್ಧೆಗಳಿದ್ದರೂ ಸುಹಾಸಿನಿಯವರಿಗೊಂದು ಬಹುಮಾನ ಖಚಿತ ಎನ್ನುವಷ್ಟರ ಮಟ್ಟಿಗೆ ಚುರುಕಿನ ಮತ್ತು ಪ್ರತಿಭಾನ್ವತ ಬಾಲಕಿಯಾಗಿ ಗಮನ ಸೆಳೆದವರು.
ಹೀಗೆ ಬೆಳೆದ ಸುಹಾಸಿನಿಯವರು ಕಲಿಕೆ ಮುಗಿದ ಮೇಲೆ 1983 ರಲ್ಲಿ ಶಿಕ್ಷಣ ಸೇವೆಗೆ ಸೇರ್ಪಡೆಗೊಂಡರು. 1983 ರಿಂದ 85 ರವರೆಗೆ ಮೈಸೂರಿನ ಸೈಂಟ್ ರೀಟಾಸ್ ಶಾಲೆ, 1986 ರಿಂದ 90 ರವೆರೆಗೆ ಗದಗ ಜಿಲ್ಲೆಯ ಸೈಂಟ್ ಜೋನ್ಸ್ ಶಾಲೆ, 1990 ರಿಂದ 93 ರವರೆಗೆ ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟಿಯಲ್ಲಿರುವ ಸೆಕ್ರೆಡ್ ಹಾರ್ಟ್ ಶಾಲೆ, 1993 ರಿಂದ 96 ರವರೆಗೆ ದಾಂಡೇಲಿಯ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. 1996ರಿಂದ 2003 ರವರೆಗೆ ಅವೇ ಮರಿಯಾ ಶಾಲೆ ಶಿರಸಿ, 2003 ರಿಂದ 2004 ರವರೆಗೆ ಸಿದ್ದಾಪುರದ ಶಿಶು ವಿಹಾರದಲ್ಲಿ, ಆ ಬಳಿಕ 2003 ರಿಂದ 2008 ರವರೆಗೆ ಬೆಳಗಾವಿಯ ಸಂತಿಬಸ್ತವಾಡದಲ್ಲಿರುವ ಸೆಕ್ರೆಡ್ ಹಾರ್ಟ್ ಶಾಲೆ, 2008 ರಿಂದ 2010 ರವರೆಗೆ ಧಾರವಾಡದ ಪ್ರಸೆಂಟೆಶನ್ ಶಾಲೆ, 2010 ರಿಂದ 2015 ರವರೆಗೆ ಲೋಂಡಾದಲ್ಲಿರುವ ಮೆಡಲಿನ್ ಶಾಲೆಯಲ್ಲಿ ಸೇವೆ ಸಲ್ಲಿಸಿ 2015 ರಿಂದ ಈವರೇಗೆ ಕಳೆದ 7 ವರ್ಷಗಳಿಂದ ದಾಂಡೇಲಿಯ ಸೈಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಸಾರಥ್ಯವನ್ನು ವಹಿಸಿ ಶಾಲೆಯನ್ನು ಸಾಧನೆಯ ಶಿಖರಕ್ಕೆ ಕೊಂಡೊಯ್ದ ಶ್ರೇಯಸ್ಸಿಗೆ ಪಾತ್ರರಾದವರು ಇದೇ ಸಿಸ್ಟರ್ ಸುಹಾಸಿನಿಯವರು. ಇವರ ಸೇವೆ ಇನ್ನೂ ಮುಂದುವರಿಯಬೇಕೆಂದು ಬಯಸಿ ಶಿಕ್ಷಣ ಸಂಸ್ಥೆ ಇದೀಗ ಗದಗದಲ್ಲಿರುವ ಲೊಯೊಲಾ ಶಾಲೆಗೆ ವರ್ಗಾವಣೆಗೊಳಿಸಿದೆ.
ನೇರ ನಡೆ, ನುಡಿಯ ಸಿಸ್ಟರ್ ಸುಹಾಸಿನಿಯವರು ಸೈಂಟ್ ಮೈಕಲ್ ಕಾನ್ವೆಂಟ್ ಜ್ಞಾನದೇಗುಲದ ಬೆಳಕನ್ನು ಮತ್ತಷ್ಟು ಪ್ರಕಾಶಮಾನಗೊಳಿಸಿದವರು. ಶಿಕ್ಷಣದ ಗುಣಮಟ್ಟದಲ್ಲಿ ಎಂದು ರಾಜಿ ಮಾಡಿಕೊಳ್ಳದೇ, ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸಿದ ಗಟ್ಟಿಗಿತ್ತಿ. ಇವರ ನೇತೃತ್ವದಲ್ಲಿ ನಡೆದ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆ ಆಟ-ಪಾಠ ಹೀಗೆ ಎಲ್ಲ ಚಟುವಟಿಕೆಗಳಲ್ಲಿಯೂ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ತನ್ನ ಸಾಧನೆಯ ಮೂಲಕ ಗಮನ ಸೆಳೆದಿದೆ. ಅತ್ಯುತ್ತಮ ಸಂವಹನ ಕಲೆಯನ್ನು ಮೈಗೂಡಿಸಿಕೊಂಡ ಸಿಸ್ಟರ್ ಸುಹಾಸಿನಿಯವರು ವಿದ್ಯಾರ್ಥಿಗಳಿಗೆ ಅಕ್ಕರೆಯ ಅಮ್ಮನಾಗಿ, ಸಹದ್ಯೋಗಿಗಳಿಗೆ ಒಲವಿನ ಸಹೋದರಿಯಾಗಿ, ಕೈ ಕೆಳಗಿನ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನವರಾಗಿಯೆ ಗುರುತಿಸಿಕೊಂಡವರು. ಅದೆಷ್ಟೋ ಸಲ ಕಸ ಗುಡಿಸುವವರ ಜೊತೆ ತಾನು ಸಹ ಸ್ವಚ್ಚತೆಯ ಕಾರ‍್ಯದಲ್ಲಿ ತೊಡಗಿಕೊಳ್ಳುವುದರ ಮೂಲಕ ಜ್ಞಾನದೇಗುಲದ ಪ್ರಗತಿಗೆ ಪ್ರಾಂಜಲ ಗುಣಮನಸ್ಸಿನಿಂದ ಸೇವೆ ಸಲ್ಲಿಸಿದ ಹಿರಿಮೆ ಸಿಸ್ಟರ್ ಸುಹಾಸಿನಿಯವರದ್ದಾಗಿದೆ.
ದಾಂಡೇಲಿಯ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಸೇವೆ ಸಲ್ಲಿಸಲು ಮಾರ್ಗದರ್ಶನ ನೀಡಿ ಹರಸಿದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ, ಸಹಕರಿಸಿದ ಸಹದ್ಯೋಗಿಗಳಿಗೆ, ಸಿಬ್ಬಂದಿಗಳಿಗೆ, ಪ್ರೋತ್ಸಾಹಿಸಿದ ವಿದ್ಯಾರ್ಥಿಗಳ ಪಾಲಕರಿಗೆ, ವಾತ್ಸಲ್ಯಮಯಿಗಳಾದ ಮುದ್ದು ವಿದ್ಯಾರ್ಥಿಗಳಿಗೆ, ಸಹಕರಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ದಾಂಡೇಲಿಯ ಜನತೆಗೆ ಸಿಸ್ಟರ್ ಸುಹಾಸಿನಿಯವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.