ಕಾರವಾರ:ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಿಯೋಜಿತ ಸಿಬ್ಬಂದಿ ತರಬೇತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಮತದಾನವು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಯಾವುದೇ ಒಂದು ಮತ ಕೂಡ ಅಮಾನ್ಯವಾಗದಂತೆ ಮತದಾರರಿಗೆ ಮತ ಚಲಾವಣೆಯನ್ನು ತಿಳಿಸಿಕೊಡಬೇಕು. ಮತಗಟ್ಟೆ ಅಧಿಕಾರಿಗಳು ನೀಡಿದ ಪೆನ್ನಿನಿಂದ ಮಾತ್ರ ಮತದಾರರು ಮತ ಚಲಾಯಿಸುವಂತೆ ತಿಳಿಸಬೇಕು ಎಂದು ಹೇಳಿದರು.
ಬ್ಯಾಲೆಟ್ ಪೇಪರ್‌ನಲ್ಲಿ ಲೋಪದೋಷಗಳು ಕಂಡುಬಂದಲ್ಲಿ ತಕ್ಷಣವೇ ಪರಿಹಾರ ಕಂಡುಕೊಂಡು ಮತದಾನಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಬೇಕು. ಪ್ರತಿ ಎರಡು ತಾಸಿನ ಮತದಾನದ ಪ್ರತಿಶತವನ್ನು ತಿಳಿಸಬೇಕು. ಮತಗಟ್ಟೆಯ 200 ಮೀ. ದೂರದಲ್ಲಿ ಗಡಿ ಗುರುತಿಸಬೇಕು. ಮತದಾನದ ದಿನ ಅಭ್ಯರ್ಥಿಗೆ ಸಂಬಂಧಪಟ್ಟಂತೆ ಪಕ್ಷದ ಚಿಹ್ನೆ ಇತ್ಯಾದಿ ಬಳಸದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಒಬ್ಬ ಮತದಾರ ಮತ್ತೊಬ್ಬ ಮತದಾರರ ಮಧ್ಯೆ 6 ಅಡಿ ಅಂತರವಿದ್ದು, ಕೋವಿಡ್ ನಿಯಮವನ್ನು ಪಾಲಿಸಿ ಮತದಾನದ ಕೊಠಡಿಯಲ್ಲಿ 4 ಜನ ಮೀರದಂತೆ ಸಾಲಿನಲ್ಲಿ ಒಬ್ಬರಂತೆ ಮತ ಚಲಾಯಿಸಬೇಕು. ಮತದಾನವು ಮಳೆಗಾಲದಲ್ಲಿ ನಡೆಯುವುದರಿಂದ ಮತ ಹಾಕಲು ಬರುವ ಮತದಾರರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಎಲ್ಲಾ ತಾಲೂಕಿನ ಮತಗಟ್ಟೆಗೆ ನೇಮಿಸಲಾದ ಪಿಆರ್‌ಓ, ಎಪಿಆರ್‌ಓ, ಪಿಒ ಹಾಗೂ ಪ್ಲಾಯಿಂಗ್ ಸ್ಕ್ವಾಡ್, ಸೆಕ್ಟರ್ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.