ಹೊನ್ನಾವರ: ಚಂದಾವರ ಗ್ರಾ.ಪಂ ವ್ಯಾಪ್ತಿಯ ನುರಾನಿ ಮೊಹಲ್ಲಾದಿಂದ ಹೊದ್ಕೆ-ಶಿರೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಮಾರುಗೇರಿ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರವಾಗಿ ರಸ್ತೆ ದುರಸ್ಥಿ ಕೈಗೊಳ್ಳುವಂತೆ ಒತ್ತಾಯಿಸಿ ಅಲ್ಲಿನ ನೂರಾರು ಗ್ರಾಮಸ್ಥರು ನಡು ರಸ್ತೆಯಲ್ಲಿ ಬಾಳೆಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದರು.
ಚಂದಾವರದಿಂದ ಕೂಗಳತೆ ದೂರದಲ್ಲಿ ಹೊದ್ಕೆ, ಶಿರೂರು ಗ್ರಾಮ ಇದೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಹುಮುಖ್ಯ ಮಾರುಗೇರಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿನಿತ್ಯ ನೂರಾರು ರೈತರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತಾರೆ. ಆದರೆ ಕಳೆದ 13 ವರ್ಷಗಳಿಂದ ಡಾಂಬರೀಕರಣ ಕಾಣದೆ ಜಲ್ಲಿ-ಕಲ್ಲುಗಳು ಎದ್ದು, ಸಂಪೂರ್ಣ ಹಾಳಾಗಿ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಅನೇಕ ವಾಹನ ಸವಾರರು ಹಲವಾರು ಬಾರಿ ಬಿದ್ದು, ಅಪಘಾತಕ್ಕೊಳಗಾದ ಉದಾಹರಣೆಗಳಿವೆ.
ಕುಮಟಾ ಪಟ್ಟಣಕ್ಕೆ ಹೋಗಲು ಅತ್ಯಂತ ಸಮೀಪದ ರಸ್ತೆಯಾಗಿದೆ. ಈ ರಸ್ತೆ ಬಿಟ್ಟರೆ ಸಾಂತಗಲ್ ಹಾಗೂ ಕಣಿವೆ ಮಾರ್ಗದ ರಸ್ತೆಯನ್ನೇ ಅವಲಂಬಿಸಿ ಸುತ್ತುವರಿದು ಹೋಗಬೇಕು. ಊರಿನಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಮತ್ತು ಗರ್ಭಿಣಿಯರಿಗೆ ಆಸ್ಪತ್ರೆಗೆ ಹೋಗಲು ಈ ರಸ್ತೆ ಬಹಳ ಅನುಕೂಲಕರವಾಗಿದೆ. ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ ಅವರು ಒಮ್ಮೆ ಭೇಟಿ ನೀಡಿ ರಸ್ತೆಯ ಅವ್ಯವಸ್ಥೆಯನ್ನು ಪರಿಶೀಲಿಸಬೇಕು. ಅತೀ ಶೀಘ್ರದಲ್ಲಿ ರಸ್ತೆಯನ್ನು ದುರಸ್ಥಿಗೊಳಿಸಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶ್ರೀಕಾಂತ ಭಂಡಾರಿ, ರತ್ನಾಕರ ಐಗಳ್, ರವಿ ಪಾಂಡುರಂಗ, ರಮೇಶ ನಾಯ್ಕ, ನಾರಾಯಣ ನಾಯ್ಕ, ಮಹೇಶ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ಸಂದೇಶ ಮಾಂಜರೇಕರ್, ಸಂದೀಪ ನಾಯ್ಕ, ಲಕ್ಷ್ಮಣ್ ಮರಾಠಿ, ದಯಾನಂದ ನಾಯ್ಕ, ಹರೀಶ ನಾಯ್ಕ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೋಟ್…
ಮಾರುಗೇರಿ ರಸ್ತೆ ಇದು ಬಹಳ ಪುರಾತನ ರಸ್ತೆಯಾಗಿದೆ. ಹಳ್ಳಿಯಿಂದ ಪಟ್ಟಣಕ್ಕೆ ಹೋಗಿಬರಲು ಅತ್ಯ ಸಮೀಪದ ರಸ್ತೆಯಾಗಿದೆ. ಅನೇಕರು ನಡಿಗೆಯ ಮೂಲಕವೇ ಚಂದಾವರಕ್ಕೆ ಪಡಿತರ ಇತ್ಯಾದಿ ಸರಕು ಸಾಮಗ್ರಿಗಳನ್ನು ತರಲು ಹೋಗುತ್ತಾರೆ. ಆದರೆ ರಸ್ತೆ ಹಾಳಾಗಿದ್ದರಿಂದ ನಡೆದುಕೊಂಡು ಹೋಗುವುದೂ ಸಹ ಬಲು ತೊಂದರೆಯಾಗಿದೆ. ಶಾಸಕರು ಈ ಬಗ್ಗೆ ಗಮನ ಹರಿಸಬೇಕು.
· ರತ್ನಾಕರ ಐಗಳ್, ಗ್ರಾಮಸ್ಥ