ಭಟ್ಕಳ: ಮೊಗೇರ ಸಮಾಜವು ಜಿಲ್ಲೆಯ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಮತ್ತು ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ 72ನೇ ದಿನದ ಧರಣಿ ಸತ್ಯಾಗ್ರಹ ನಡೆಸುತ್ತಾ ಮುಂದುವರೆದಿದ್ದು, ಇಷ್ಟಾದರು ಸರಕಾರದಿಂದ ಸಿಗದ ಸ್ಪಂದನೆಯ ಹಿನ್ನೆಲೆ ಹೋರಾಟದ ಮೊದಲಹಂತದ ರೂಪುರೇಷೆಯಾಗಿ ಸಮಾಜದ ಮಕ್ಕಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮೆರವಣಿಗೆಯನ್ನು ಶುಕ್ರವಾರದಂದು ನಡೆಸಲಿದ್ದೇವೆ ಎಂದು ಮೊಗೇರ ಸಮಾಜದ ಹಿರಿಯ ಮುಖಂಡ ಎಫ್.ಕೆ.ಮೊಗೇರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಈ ಹೋರಾಟಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ.
ಗುರುವಾರದಂದು ಇಲ್ಲಿನ ಮಿನಿ ವಿಧಾನಸೌಧದ ಮೊಗೇರ ಸಮಾಜ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಮಾ.23ರಿಂದ ಸರಕಾರ ಹಾಗೂ ಜನಪ್ರತಿನಿಧಿಗಳು, ಸಂಬಂಧಪಟ್ಟಇಲಾಖಾ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಧರಣಿ ಸತ್ಯಾಗ್ರಹವನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಧರಣಿ ಸತ್ಯಾಗ್ರಹ ಆರಂಭದಿಂದ ಇಲ್ಲಿಯ ತನಕ ಕೇವಲ ಆಶ್ವಾಸನೆ ಹೊರತು ಇನ್ನೇನು ಯಾವ ರೀತಿಯಲ್ಲಿಯೂ ನಮಗೆ ಸ್ಪಂದಿಸಿ ಬೇಡಿಕೆ ಈಡೇರಿಕೆಗೆ ಇಲಾಖೆ ಅಥವಾ ಸರಕಾರ ಮುಂದಾಗಿಲ್ಲ. ಸಂವಿಧಾನಬದ್ದವಾದ ಪ್ರಮಾಣೀತ ರೀತಿಯಲ್ಲಿ ಸರಕಾರವನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೊಗೇರ ಸಮಾಜಕ್ಕೆ ನೀಡಿದ ಹಕ್ಕು ಪುನಃ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಅಂದು ನಮ್ಮ ಸಮಾಜದ ಪರಿಸ್ಥಿತಿಯನ್ನು ಗಮನಿಸಿ ಆದೇಶಿಸಿದ ಪ್ರತಿಯು ಸಹ ನಮ್ಮ ಜೊತೆಗೆ ಇದ್ದು ಆದರೆ ಸರಕಾರ ಹಾಗೂ ಜನಪ್ರತಿನಿಧಿ, ಅಧಿಕಾರಿಗಳು ಪಟ್ಟಬದ್ಧ ಹಿತಾಸಕ್ತಿಗೆ ಮಣಿದು ನಮ್ಮ ಸಮಾಜಕ್ಕೆ ನೀಡಿದ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದರು.
ಏಪ್ರಿಲ್ 29ರಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಅಧಿಕಾರಿಗಳು ಎರಡು ವಾರದ ಗಡುವು ಸಹ ನಮ್ಮ ಬಳಿ ಕೇಳಿದ್ದು, ಇಲ್ಲಿಗೆ ಒಂದು ತಿಂಗಳು ಕಳೆದರು ಯಾವೊಬ್ಬರ ಪ್ರತಿಕ್ರಿಯೆ ಸಹ ಬಂದಿಲ್ಲ ಎಂಬುದು ವಿಪರ್ಯಾಸವಾಗಿದೆ. ಈ ಬಗ್ಗೆ ಸಚಿವರಲ್ಲಿ ಪ್ರಶ್ನಿಸಿದರೆ ಕೇವಲ ದಿನ ಮುಂದೂಡುವ ಮಾತಗಳನ್ನಾಡುತ್ತಾರೆ ಹೊರತು ಅವರಿಂದ ಯಾವುದೇ ಸಕಾರಾತ್ಮಕ ಉತ್ತರ ಬರುತ್ತಿಲ್ಲ. ನಮ್ಮ ಸಮಾಜದ ಧರಣಿಯನ್ನು ಸರಕಾರವೂ ಹಗುರವಾಗಿ ತೆಗೆದುಕೊಂಡಲ್ಲಿ ಮುಂದಾಗುವ ಪರಿಣಾಮಕ್ಕೆ ಅವರೇ ಹೊಣೆಗಾರರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊಗೇರ ಸಮಾಜವೂ ಯಾವುದೇ ವಾಮಮಾರ್ಗದಲ್ಲಿ ಅವರ ಹಕ್ಕಿಗಾಗಿ ಒತ್ತಾಯಿಸಿದ್ದಲ್ಲಿ ಸಮಾಜದ ಎಲ್ಲರನ್ನು ಸಾಮೂಹಿಕವಾಗಿ ಜೈಲಿಗೆ ಹಾಕಬಹುದಾಗಿದೆ. ಆದರೆ ನಾವು ಈಗಾಗಲೇ 1976ರಿಂದ ಸೌಲಭ್ಯದ ಫಲಾನುಭವಿಗಳಾಗಿದ್ದ ವೇಳೆ ಕಸಿದುಕೊಂಡಿರುವುದಕ್ಕೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು, ಅಧಿಕಾರಿಗಳು ಉತ್ತರಿಸಬೇಕು ಎಂದರು.
ಇನ್ನೋರ್ವ ಹಿರಿಯ ಮುಖಂಡ, ಲಕ್ಷ್ಮೀ ಸರಸ್ವತಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಮೊಗೇರ ಮಾತನಾಡಿ, ಸಮಾಜಕ್ಕೆ ಸಿಗಬೇಕಾದ ಹಕ್ಕಿಗಾಗಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ 72 ದಿನಗಳ ತನಕ ನಿತ್ಯವೂ ಗಾಳಿ, ಮಳೆ, ಚಳಿ ಲೆಕ್ಕಿಸದೇ ಧರಣಿ ನಡೆಸುತ್ತಾ ಬಂದಿದ್ದೇವೆ. ನಮ್ಮ ಸಮಾಜದ ಆರ್ತನಾದ ಮಾತ್ರ ಸರಕಾರದ ಜನಪ್ರತಿನಿಧಿಗಳಿಗೆ ಮಾತ್ರ ಕೇಳುತ್ತಿಲ್ಲ ಇದು ದೌರ್ಭಾಗ್ಯವಾಗಿದೆ. ನಾವು ಪಡೆದುಕೊಂಡ ಹಕ್ಕನ್ನು ಸರಕಾರ ಕಸಿದುಕೊಂಡಿದೆ ಅದನ್ನೇ ನಾವು ಕೇಳುತ್ತಿರುವುದು ಯಾವುದೇ ಭಿಕ್ಷೆ ಕೇಳುತ್ತಿಲ್ಲ ಎಂಬುದು ಸರಕಾರದ ಗಮನಕ್ಕೆ ಇರಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಕುಂದ ಮೊಗೇರ, ಭಾಸ್ಕರ ಮೊಗೇರ, ಕ್ರಷ್ಣ ಮೊಗೇರ, ವೆಂಕಟರಮಣ ಮೊಗೇರ, ದಾಸಿ ಮೊಗೇರ, ಶ್ರೀಧರ ಮೊಗೇರ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು ಮಕ್ಕಳು ಇದ್ದರು.
ಕೋರ್ಟ್ ಆದೇಶ ಜನಸಾಮಾನ್ಯರಿಗೆ ಮಾತ್ರವೇ?
ಈಗಾಗಲೇ ಮೊಗೇರ ಸಮಾಜಕ್ಕೆ ನ್ಯಾಯಾಲಯದ ಆದೇಶ, ಮಾನವ ಹಕ್ಕು ಆಯೋಗ ಹಾಗೂ ಪರಿಶಿಷ್ಟ ಜಾತಿ ಆಯೋಗವೂ ಮೊಗೇರರಿಗೆ ಹಕ್ಕು ನೀಡಬೇಕೆಂದಿದ್ದರು ಸಹ ಸರಕಾರ ಮಾತ್ರ ಆದೇಶ ನೀಡುತ್ತಿಲ್ಲ. ಹಾಗಿದ್ದರೆ ನ್ಯಾಯಾಲಯದ ಆದೇಶ ಪಾಲನೆ ಕೇವಲ ಜನಸಾಮಾನ್ಯರಿಗೆ ಮಾತ್ರವೇ? ಇದು ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲವೇ ಎಂದು ಹಿರಿಯ ಮುಖಂಡ ಎಫ್.ಕೆ.ಮೊಗೇರ ಸರಕಾರವನ್ನು ಪ್ರಶ್ನಿಸಿದರು.
ಇಷ್ಟು ದಿನಗಳ ಕಾಲ ನಮ್ಮ ಹಕ್ಕಿಗಾಗಿ ನಾವು ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಸಹ ಸರಕಾರ ಆಗಲಿ ಜನಪ್ರತಿನಿಧಿಗಳಾಗಲಿ ಸ್ಪಂದಿಸದೇ ಇರುವುದು ನೋಡಿದರೆ ಸರಕಾರಕ್ಕೆ ನಮ್ಮ ಹಕ್ಕು ನಮಗೆ ಕೊಡಲು ಅವರಿಗೆ ಧಮ್ ಇಲ್ಲ ಎಂಬುದು ಖಾತರಿಯಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಹ ದಿನದೂಡುವುದು ಗಮನಿಸಿದರೆ ಯಾರಿಗೂ ಸಹ ಎದೆಗಾರಿಕೆ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.