ಸಿದ್ದಾಪುರ: ತಾಲೂಕಿನ ಸರಕುಳಿಯ ಶ್ರೀ ಜಗದಂಬಾ ಪ್ರೌಢಶಾಲೆಯಲ್ಲಿ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ 14 ವಿದ್ಯಾರ್ಥಿಗಳನ್ನು ಅಭಿನಂದನಾ ಪತ್ರ, ಸ್ಮರಣಿಕೆ ಹಾಗೂ ನಗದು ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು. 99%ಕ್ಕಿಂತ ಅಧಿಕ ಅಂಕ ಪಡೆದು, ರಾಜ್ಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.
ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಭೂಮಿಕಾ ಹೆಗಡೆ ಮಾತನಾಡಿ, ‘ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಈ ರೀತಿಯ ಸಾಧನೆ ಸಾಧ್ಯವಾಗಿದೆ. ಶಿಕ್ಷಕರನ್ನು ಗೌರವಿಸಿ, ಶಿಕ್ಷಕರ ಮಾತುಗಳನ್ನು ಪಾಲಿಸುವುದೇ ಯಶಸ್ಸಿನ ಸೂತ್ರ’ ಎಂದು ತಿಳಿಸಿದಳು.
ಸರಕುಳಿ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಹೆಗಡೆ ತ್ಯಾರಗಲ್ ಮಾತನಾಡಿ, ‘ಶಾಲೆಯ ಮಕ್ಕಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಎಲ್ಲಾ ವಿದ್ಯಾರ್ಥಿಗಳ ಮುಂದಿನ ಜೀವನ ಸುಖಮಯವಾಗಿರಲಿ, ಮುಂದಿನ ವಿದ್ಯಾರ್ಥಿಗಳೂ ಸಹ ಇದೇ ರೀತಿಯ ಫಲಿತಾಂಶವನ್ನು ನೀಡಿ, ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಬೇಕು’ ಎಂದು ಆಶಿಸಿದರು.
ಪ್ರೌಢಶಾಲೆಯ ಎಲ್ಲಾ ಸಿಬ್ಬಂದಿಗಳು, ಸರಕುಳಿ ಶಿಕ್ಷಣ ಸಮಿತಿಯ ಸದಸ್ಯರು, ಪಾಲಕ ಪೋಷಕರು, ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಕೃಷ್ಣಮೂರ್ತಿ ಎಚ್ ಎಸ್ ಸ್ವಾಗತಿಸಿದರು. ಸಂಸ್ಕೃತ ಶಿಕ್ಷಕರಾದ ವಿಘ್ನೇಶ್ವರ ಕೆ.ಎಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ವಿ.ನಾಯ್ಕ ವಂದಿಸಿದರು.