• Slide
  Slide
  Slide
  previous arrow
  next arrow
 • ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಮರೆತುಹೋದ ಸಂಸ್ಕಾರ: ಸಚ್ಚಿದಾನಂದ ಶ್ರೀ

  300x250 AD

  ಶಿರಸಿ:ತಾಲೂಕಿನ ಅಗಸೆಬಾಗಿಲಿನಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ದೈವಜ್ಞ ಸಮಾಜದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ದೈವಜ್ಞ ಸಭಾಭವನವನ್ನು ಶ್ರೀಕ್ಷೇತ್ರ ಕರ್ಕಿಯ ಶ್ರೀಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.

  ಮುಂದುವರಿದ ಜಗತ್ತಿಗೆ ತಂತ್ರಜ್ಞಾನಗಳ ಅವಶ್ಯಕತೆಯಿದೆ. ಆದರೆ ಅದು ಸಮರ್ಪಕವಾಗಿ ಬಳಕೆಯಾಗದೆ ದುರ್ಬಳಕೆಯಾಗುತ್ತಿರುವುದು ಸಮಾಜಕ್ಕೆ ಕಂಟಕವಾಗಲಿದೆ ಎಂದು ನುಡಿದರು.
  ತಂತ್ರಜ್ಞಾನಗಳು ಸಮಾಜದ ಹಿತಕ್ಕಾಗಿ ಆವಿಷ್ಕಾರಗೊಳ್ಳುತ್ತಿವೆಯಾದರೂ ಮನುಷ್ಯ ಅದನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿ ಸಮಾಜದ ಅಭಿವೃದ್ಧಿಯನ್ನೆ ಕುಂಠಿತಗೊಳ್ಳುವಂತೆ ಮಾಡುತ್ತಿರುವದಾಗಿ ತಿಳಿಸಿದರು.

  ನಮ್ಮ ಆಚಾರ- ವಿಚಾರ, ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಕಂಡುಕೊಳ್ಳಬೇಕಾಗಿದೆ. ಪಾಶ್ಚಿಮಾತ್ಯದ ಬದುಕು ನಮ್ಮ ಸಂಸ್ಕೃತಿಗೆ ಮಾರಕವಾಗಿರುವುದರಿಂದ ನಾವು ನಮ್ಮ ಹಿರಿಯರು ಕಲಿಸಿಕೊಟ್ಟ ಸಂಸ್ಕಾರಕ್ಕೆ ಒಗ್ಗಿಕೊಳ್ಳಬೇಕು. ಹಿಂದೆ ಹಿರಿಯರು ಕಷ್ಟದ ಸಮಯದಲ್ಲಿಯೂ ಸಂಸ್ಕಾರವನ್ನು ಅಳವಡಿಸಿಕೊಂಡು ಬಂದಿದ್ದಾರೆ. ಆದರೆ ಜಗತ್ತು ಬದಲಾಗಿ ಇಂದಿನವರು ಸುಖದಲ್ಲಿದ್ದರೂ ಸಂಸ್ಕಾರವನ್ನು ಮರೆತಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂದರು.

  ವ್ಯಕ್ತಿ ಶಕ್ತಿಯಾಗಿ ಇನ್ನೊಬ್ಬರಿಗೆ ಉಪಕಾರಿಯಾಗಬೇಕೇ ವಿನಃ ಅಹಂಕಾರಿಯಾಗಬಾರದು. ನಯ- ವಿನಯತೆ ತುಂಬಿದ ಬದುಕು ಯಾವತ್ತೂ ನಮ್ಮನ್ನು ತಲೆ ಎತ್ತುವಂತೆ ಮಾಡುತ್ತದೆ. ಶ್ರೇಷ್ಠ ದೈವಜ್ಞ ಸಮಾಜಕ್ಕೆ ಅದರದ್ದೆ ಆದ ವಿಶೇಷತೆಯಿದೆ. ಅದರ ಶ್ರೇಷ್ಠತೆ ನೂತನವಾಗಿ ನಿರ್ಮಿಸಿದ ದೈವಜ್ಞ ಸಭಾಭವನದಿಂದ ಹೆಚ್ಚಾಗಿದೆ. ಭವನ ಅತ್ಯಂತ ಸುಂದರವಾಗಿ ಮೂಡಿ ಬಂದಿದ್ದು, ನನಗೆ ಸ್ವರ್ಗದಲ್ಲಿ ಕುಳಿತು ಮಾತನಾಡುತ್ತಿರುವ ಅನುಭವವಾಗಿದೆ. ಭವನಕ್ಕೆ ಶ್ರಮಿಸಿದ ಸುವರ್ಣ ಕಲಾಕಾರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆರ್ಣೇಕರ್ ಸೇರಿದಂತೆ ದೈವಜ್ಞ ಸಮಾಜದ ಎಲ್ಲಾ ಬಂಧುಗಳು ಅಭಿನಂದನೆಗೆ ಅರ್ಹರೆಂದರು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಮಾಜದಲ್ಲಿ ಶಾಂತಿ- ನೆಮ್ಮದಿ ನೆಲಗೊಳ್ಳಬೇಕಾದರೆ ಮೊದಲು ದೇವರಲ್ಲಿ ನಂಬಿಕೆ ಬಲಗೊಳ್ಳಬೇಕು. ನಮಗೆ ದೇಶದ ಇತಿಹಾಸ ಎಷ್ಟು ಮುಖ್ಯವೋ ನಮ್ಮ ಕುಟುಂಬದ ಇತಿಹಾಸವೂ ಅಷ್ಟೇ ಮುಖ್ಯವಾಗುತ್ತದೆ. ಕುಟುಂಬದ ಸರಪಳಿ ಎಲ್ಲಿ ಅಂತ್ಯಗೊಂಡಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಅದರ ಇತಿಹಾಸ ತಿಳಿಯುವ ಪ್ರಯತ್ನ ನಮ್ಮಿಂದಾಗಬೇಕಿದೆ. ನಮಗೆ ಹಣದ ಸಂಪಾದನೆಗಿಂತ ಜ್ಞಾನದ ಸಂಪಾದನೆ ಅತೀ ಮುಖ್ಯ. ಒಮ್ಮೆ ಸಂಪಾದಿಸಿದ ಹಣ ಖರ್ಚಾಗಬಹುದು. ಆದರೆ ಸಂಪಾದಿಸಿದ ಜ್ಞಾನ ಶಾಶ್ವತವಾಗಿರುತ್ತದೆ. ಆದ್ದರಿಂದ ನಾವು ಗಳಿಸಿದ ಜ್ಞಾನ ಇನ್ನೊಬ್ಬರಿಗೆ ಹಂಚುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು ಹೇಳಿದರು.

  300x250 AD

  ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ನೂತನ ಸಭಾಭವನದ ನಿರ್ಮಾಣದಿಂದಾಗಿ ದೈವಜ್ಞ ಸಮಾಜಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಸಭಾಭವನದಲ್ಲಿ ದೈವಜ್ಞ ಸಮಾಜದ ಬಡವರ ಪರವಾದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕೆಂದರು.

  ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಜಗತ್ತು ಸ್ಪರ್ಧಾತ್ಮಕವಾಗಿರುವುದರಿಂದ ನಾವಿಲ್ಲಿ ಪ್ರತಿಕ್ಷಣವೂ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ನಮಗೆ ಹಣಕ್ಕಿಂತ ಆರೋಗ್ಯ ಮುಖ್ಯ. ಆರೋಗ್ಯದಿಂದ ಮಾತ್ರ ಎಲ್ಲವನ್ನೂಗಳಿಸಲು ಸಾಧ್ಯ. ಹಣದಿಂದ ಪ್ರೀತಿ- ವಿಶ್ವಾಸ- ನೆಮ್ಮದಿ ದೂರವಾಗಿ ದುರಾಸೆ ನಮಗೆ ಹತ್ತಿರವಾಗುತ್ತದೆ. ಆದ್ದರಿಂದ ನಾವು ಗಳಿಸಿದ ಹಣ ಯಾವತ್ತೂ ಸದ್ವಿನಿಯೋಗವಾಗಬೇಕೆಂದರು.

  ಸುವರ್ಣ ಕಲಾಕಾರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಆರ್.ರಾಯ್ಕರ ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ದೈವಜ್ಞ ಬ್ರಾಹ್ಮಣ ಮಠದ ಕಾರ್ಯಾಧ್ಯಕ್ಷ ಆರ್.ಎಸ್.ರಾಯ್ಕರ ಉಪ್ಪೋಣಿ, ಡಿಸಿಸಿ ಅಧ್ಯಕ್ಷ ಭೀಮಣ್ಣ ಟಿ.ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ವಿದ್ವಾನ್ ಅನಂತ ಭಟ್ಟ ಹಿರೇಮನೆ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಕೃಷ್ಣರಾಯ ಪಿ.ಕಾನಳ್ಳಿ, ಕಾಮಧೇನು ಜ್ಯುವೆಲ್ಲರ್‌ನ ಗಜಾನನ ಆರ್.ಪಾಲನಕರ್, ಸುವರ್ಣ ಕೋ- ಆಪ್ ಸೊಸೈಟಿಯ ಮಾಜಿ ಅಧ್ಯಕ್ಷ ಸುರೇಶ ಶೇಟ್, ಮಾಜಿ ಶಾಸಕ ಗಂಗಾಧರ ಭಟ್ಟ, ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ವಿನೋದಾ ವಿ.ಶೇಟ್ ಮುಂತಾದವರು ಇದ್ದರು. ಉದಯಕುಮಾರ ಕಾನಳ್ಳಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.


  Share This
  300x250 AD
  300x250 AD
  300x250 AD
  Leaderboard Ad
  Back to top