ಶಿರಸಿ: ಇಲ್ಲಿನ ಉಪವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸಿ.ಡಿ.ನಾಯ್ಕ ಅವರಿಗೆ ಮಂಗಳವಾರ ಟಿಎಂಎಸ್ ಸಭಾಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಿ.ಡಿ.ನಾಯ್ಕರವರಿಗೆ ಅಭಿನಂದಿಸಿ ಮಾತನಾಡಿ, ಅಧಿಕಾರಿಗಳಿಗೆ ನಿವೃತ್ತಿ ಎನ್ನುವುದು ಸಹಜ. ಆದರೆ ಅಧಿಕಾರಾವಧಿಯಲ್ಲಿ ನಾವೇನು ಸಾರ್ವಜನಿಕರಿಗೆ ಮಾಡಿದ್ದೇವೆ ಎನ್ನುವುದು ಶಾಶ್ವತವಾಗಿ ನೆನಪಿನಲ್ಲಿರುತ್ತದೆ. ಆದ್ದರಿಂದ ಅಧಿಕಾರಿಗಳು ನಿವೃತ್ತಿಯಾಗುವ ಮುನ್ನವೇ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಿ.ಡಿ.ನಾಯ್ಕರವರು ಅಧಿಕಾರಿಯಾಗಿ ಜನರಿಗೆ ಒಳ್ಳೆಯ ಸೇವೆ ಮಾಡಿದ್ದರಿಂದಲೇ ಅವರನ್ನು ಅಭಿನಂದಿಸಲು ಇಷ್ಟೊಂದು ಜನರು ಬಂದಿದ್ದಾರೆಂದರು.
ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಸಿ.ಡಿ.ನಾಯ್ಕರು ಜನಪ್ರಿಯ ಅಧಿಕಾರಿಯಾಗಿ ಇಂದು ನಿವೃತ್ತಿ ಹೊಂದುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ಸೇರಿದ ಜನರೇ ಸಾಕ್ಷಿಯಾಗಿದ್ದಾರೆ. ಅವರು ಉಪವಿಭಾಗದ ಸಾರಿಗೆ ಅಧಿಕಾರಿಯಾದರೂ ಜನಸಾಮನ್ಯರ ಹತ್ತಿರ ಹೋಗಿ ಕೆಲಸ ಮಾಡುವ ಗುಣ ಅವರಲ್ಲಿ ಕಾರ್ಯಗತವಾಗಿದೆ ಎಂದರು.
ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಸಿ.ಡಿ.ನಾಯ್ಕರವರು ತಮ್ಮ ಸೇವಾವಧಿಯವರೆಗೂ ಪ್ರಮಾಣಿಕರಾಗಿ ಕೆಲಸ ಮಾಡಿದ್ದಾರೆ. ಅವರು ಕಚೇರಿಯ ಯಜಮಾನರಾಗಿ ಸಿಬ್ಬಂದಿಗಳನ್ನು ಕುಟುಂಬದ ಸದಸ್ಯರಂತೆ ಕಂಡವರು. ಅವರ ನಿವೃತ್ತಿಯಿಂದ ಆರ್ಟಿಓ ಕಚೇರಿ ಯಜಮಾನನಿಲ್ಲದ ಮನೆಯಂತಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಡಿ.ನಾಯ್ಕ, ಯಾವುದೇ ಒತ್ತಡವಿಲ್ಲದೇ ಸುದೀರ್ಘ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಜನಪ್ರತಿನಿಧಿಗಳು ಸೇರಿದಂತೆ ಕಚೇರಿಯ ಮೇಲಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಜೀವನಕ್ಕೆ ದಾರಿ ಮಾಡಿಕೊಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಭಾರಿಯಾಗಿದ್ದೇನೆ ಎಂದು ಹೇಳಿದರು.