ಯಲ್ಲಾಪುರ:ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮಧ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಮತ್ತು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಉದ್ಘಾಟಿಸಿ ಮಾತನಾಡಿದರು.
ಎರಡು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗಿ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಕ್ರೀಡಾ ಮನೋಭಾವ ಬೆಳೆಸಿಕೊಂಡ ಮಗು ಮುಂದಿನ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಲ್ಲದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಶಿಸ್ತಿಗೆ ಇನ್ನೊಂದು ಹೆಸರು ದೈಹಿಕ ಶಿಕ್ಷಣ. ಮೈದಾನದಲ್ಲಿ ಆಟವಾಡುತ್ತ ಬೆಳೆಯುವ ವಿದ್ಯಾರ್ಥಿ ದೈಹಿಕ ಸಾಮರ್ಥ್ಯದ ಜೊತೆ ಅನೇಕ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ. ದೈಹಿಕ ಶಿಕ್ಷಕರ ಪ್ರಭಾವ ವಿದ್ಯಾರ್ಥಿಯ ಮೇಲೆ ತೀವ್ರವಾಗಿರುತ್ತದೆ. ವಿವಿಧ ಕ್ರೀಡೆಗಳ ತರಬೇತಿಯನ್ನು ತಾಲೂಕಾ ಮಟ್ಟದಲ್ಲಿ ನೀಡುವ ಸಾಮರ್ಥ್ಯ ವಿಶ್ವದರ್ಶನಕ್ಕಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತರಾದ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಉಮಾಪತಿ ಎನ್.ಎಚ್. ಮತ್ತು ರಹಿಮಾ ಶೇಖ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಉಮಾಪತಿ ಎನ್.ಎಚ್. ಮಾತನಾಡಿ, ಈ ಎಲ್ಲ ಸನ್ಮಾನ, ಗೌರವ ತಮ್ಮ ತಾಯಿಗೆ ಸಮರ್ಪಣೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಸಂತ ಭಂಡಾರಿ ನಿವೃತ್ತರನ್ನು ಸನ್ಮಾನಿಸಿ ಶುಭ ಹಾರೈಸಿದರು. ಬೀಸಗೋಡ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿನೋದ ನಾಯಕ ಪ್ರಭಾರಿಯಾಗಿ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾಗಿ ಅಧಿಕಾರ ವಹಿಸಿಕೊಂಡರು.
ಪ್ರಭಾತ್ ಭಟ್ ಪ್ರಾರ್ಥಿಸಿದನು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ ಸ್ವಾಗತಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಜಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಿ.ಕೆ.ಗಾಂವ್ಕರ್ ವಂದಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ನಾಯಕ, ತಾಲೂಕಾ ಅಧ್ಯಕ್ಷ ಆರ್ ಆರ್ ಭಟ್, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ನಿವೃತ್ತ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ರವೀಂದ್ರ ಕಾಪಸ್ಸೆ ಉಪಸ್ಥಿತರಿದ್ದರು.