ಕಾರವಾರ: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಜಿಲ್ಲಾ ಕಾರಾಗೃಹ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಹೇಳಿದಂತೆ ಎಲ್ಲರೂ ಸಮಾನರು. ಖೈದಿಗಳಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಎಲ್ಲರಿಗೂ ಸಿಗಬೇಕೆಂಬ ಆಶಯದಿಂದ ಕಾರಾಗೃಹ ಕೈದಿಗಳ ಜ್ಞಾನ ಸಂಪಾದನೆಗೆ ಡಿಜಿಟಲ್ ಗ್ರಂಥಾಲಯವನ್ನು ತೆರೆಯಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಮಾತನಾಡಿ, ತಿಳಿದೋ ತಿಳಿಯದೆಯೋ ತಪ್ಪು ಮಾಡಿ ಇಲ್ಲಿಗೆ ಬಂದಂತಹ ಅತಿಥಿಗಳು ನೀವು. ಜೈಲುವಾಸ ಶಿಕ್ಷೆ ಎಂದು ತಿಳಿಯದೇ, ನಿಮ್ಮನ್ನ ನೀವು ಅರಿತುಕೊಳ್ಳಲು ಇದೊಂದು ಅವಕಾಶವಾಗಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳಲು ಜ್ಞಾನದ ಅವಶ್ಯಕತೆ ಇದ್ದು, ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿಕೊಳ್ಳಲು ನಿಮಗೆ ಡಿಜಿಟಲ್ ಗ್ರಂಥಾಲಯ ಸಹಾಯಕವಾಗಲಿದೆ ಎಂದು ಹೇಳಿದರು.
ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ವಿಶ್ರಾಮ ನಾಯ್ಕ ಮಾತನಾಡಿ, ಕೋವಿಡ್ ಕಾಲದಲ್ಲಿ ಪುಸ್ತಕ ಜ್ಞಾನದಿಂದ ವಂಚಿತರಾದವರು ಅನೇಕರಿದ್ದಾರೆ. ಅಂತಹವರಿಗಾಗಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಮಾಡಲಾಯಿತು. ಸದ್ಯ ಕಾರಾಗೃಹ ಕೈದಿಗಳಿಗೂ ಈ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಈರಣ್ಣ ಬಿ.ರಂಗಾಪುರ, ತಪ್ಪು ನಡೆಯುವುದು ಸಹಜ. ಅದರಿಂದ ಪಶ್ಚಾತ್ತಾಪ ಪಡುವುದು ಮುಖ್ಯ. ಕಾರಾಗೃಹ ವಾಸವನ್ನು ಶಿಕ್ಷೆ ಎಂದು ತಿಳಿಯದೇ ಮುಂದಿನ ಜೀವನಕ್ಕಾಗಿ ಈ ಸಮಯದ ಉಪಯೋಗ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾ ಕಾರಾಗೃಹ ಶಿಕ್ಷಕ ರಾಘವೇಂದ್ರ ಶಾನಭಾಗ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ಮತ್ತು ಗ್ರಂಥಾಲಯ ಸಿಬ್ಬಂದಿ ಉಪಸ್ಥಿತರಿದ್ದರು.