ಅಂಕೋಲಾ: ಸರಕಾರಿ ಪದವಿಪೂರ್ವ ಕಾಲೇಜು ಪೂಜಗೇರಿಯಲ್ಲಿ ರೂರಲ್ ರೋಟರಿ ಕ್ಲಬ್‌ನಿಂದ ತಾಲೂಕಿನ ಆಯ್ದ ಉತ್ತಮ ಶಿಕ್ಷಕರಿಗೆ ನೇಷನ್ ಬಿಲ್ಡರ್ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಸುರೇಶ ವಿ.ನಾಯಕ, ಪಿ.ಎಮ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಕೋಮಲ ಹಿರೇಮಠ, ಅವರ್ಸಾ ಗಂಡು ಮಕ್ಕಳ ಶಾಲೆಯ ಶಿಕ್ಷಕಿ ಲಕ್ಷ್ಮಿ ನಾಯಕ, ಬೇಲೆಕೇರಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರಶಾಂತ ನಾಯ್ಕರವರನ್ನು ಸನ್ಮಾನಿಸಿ ನೇಷನ್ ಬಿಲ್ಡರ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯರಾದ ಡಾ.ನಸರುಲ್ಲಾ ಖಾನ್ ಮಾತನಾಡಿ, ರೂರಲ್ ರೋಟರಿ ಕ್ಲಬ್ ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಕ್ಲಬ್‌ನ ಕಾರ್ಯವನ್ನು ಶ್ಲಾಘಿಸಿದರು.
ಅತಿಥಿಗಳಾಗಿ ಆಗಮಿಸಿದ ರೂರಲ್ ರೋಟರಿ ಅಧ್ಯಕ್ಷ ರೊ.ಸಂತೋಷ ಕೇಣಿಕರ್ ಮಾತನಾಡಿ, ದೇಶದ ಉಜ್ವಲ ಭವಿಷ್ಯವನ್ನು ನಿರ್ಮಿಸುವ ಮುಂದಿನ ಮಕ್ಕಳನ್ನು ತಯಾರು ಮಾಡುವ ಶಿಕ್ಷಕರು ನಿಜವಾಗಿ ದೇಶ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ದೇಶಕ್ಕಾಗಿ ಅವರ ಕೊಡುಗೆ ತುಂಬಾ ಅನನ್ಯವಾದುದು ಎಂದರು.
ನೇಷನ್ ಬಿಲ್ಡರ್ ಪುರಸ್ಕಾರ ಸ್ವೀಕರಿಸಿದ ಪ್ರಾಚಾರ್ಯ ಡಾ.ಸುರೇಶ ನಾಯಕ ಮತ್ತು ಪ್ರಶಾಂತ ನಾಯ್ಕ ಮಾತನಾಡಿದರು. ಶ್ರೇಯಾ ನಾಯ್ಕ ಪ್ರಾರ್ಥನೆಗೀತೆ ಹಾಡಿದರು. ಪ್ರಾಧ್ಯಾಪಕಿ ಡಾ.ಶಾರದಾ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಸಹನಾ ನಾಯ್ಕ ನಿರೂಪಿಸಿದರು. ರಾಜೇಶ ಸಾವಂತ ವಂದಿಸಿದರು. ಈ ಸಂದರ್ಭದಲ್ಲಿ ಕ್ಲಬ್‌ನ ಕಾರ್ಯದರ್ಶಿ ರಾಘವೇಂದ್ರ ಭಟ್, ಖಜಾಂಚಿ ಪ್ರವೀಣ ಜಿ.ಶೆಟ್ಟಿ, ಸವಿತಾ ನಾಯಕ, ತುಳಸಿದಾಸ ಕಾಮತ್, ಶಿವಾನಂದ ನಾಯಕ, ವಿನಾಯಕ ಕಾಮತ್, ರವಿ ನಾಯಕ, ಸಾಯಿಶ್ ಕೇಣಿಕರ ಉಪಸ್ಥಿತರಿದ್ದರು.