ಕಾರವಾರ: ನಗರದ ಕೋಡಿಬಾಗ ಕರ್ನಾಟಕ ಕಾಲೇಜು ಧಾರವಾಡದ ವಿಶ್ರಾಂತ ಪ್ರಾಂಶುಪಾಲ ದೇವಿದಾಸ ಪೂಜಾರಿ ಅವರು ನಿಧನ ಹೊಂದಿದ್ದಾರೆ.ಸಕಲ ಕಲಾ ವಲ್ಲಭನಂತಿದ್ದ ಕಲೆ, ಸಾಹಿತ್ಯ, ಸಂಗೀತದ ಜ್ಞಾನಿ ದೇವಿದಾಸ ಎಂ. ಪೂಜಾರಿ ಕೋಡಿಬಾಗದ ಶ್ರೀ ದುರ್ಗಾದೇವಿ ದೇವಸ್ಥಾನದ ಪೂಜಾರಿಗಳಾಗಿದ್ದ ಮೋಟಾ ಅವರ ಪುತ್ರರು.
ಅವರು ಉತ್ತಮ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರಲ್ಲದೇ ಉತ್ತಮ ನಟರು, ಗಾಯಕರು ಆಗಿದ್ದರು. ಕೋಡಿಬಾಗದ ನೃಸಿಂಹ ಕಲಾಕುಂಜದ ನಾಟಕಗಳಲ್ಲಿ, ಬಾಲನಟನಾಗಿ ಪ್ರವೇಶಿಸಿದ ಅವರು 1965ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಮನೋಜ್ಞ ಅಭಿನಯದ ಮೂಲಕ ಕನ್ನಡ ಮರಾಠಿ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದವರು.ಆಜಾನುಬಾಹು ದೇಹದ, ತೂಕದ ಧ್ವನಿಯ, ಗಂಭೀರ ವ್ಯಕ್ತಿತ್ವದ ದಪ್ಪ ಮೀಸೆಯ ಅವರು ಹಾಸ್ಯದಲ್ಲಿಯೂ ಅಷ್ಟೇ ರಂಜನೀಯ ವ್ಯಕ್ತಿತ್ವವಾಗಿತ್ತು.
1959ರಲ್ಲಿ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿ 1988ರಿಂದ 94ರವರೆಗೆ ಪಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರ ಜೀವನ ಸಂಗಾತಿ ಅನಸೂಯಾ ಅವರು ಇದೇ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸುವರ್ಣ ಪದಕ ಪ್ರಶಸ್ತಿ ವಿಜೇತರೂ ಆಗಿ ನಿವೃತ್ತರಾದವರು.
ಅವರ ನಿಧನಕ್ಕೆ ಹಲವು ಗಣ್ಯರು,ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.