ಕಾರವಾರ: ತಾಲೂಕಿನ ಅಮದಳ್ಳಿಯ ಕೆಲ ಮಜಿರೆಗಳಲ್ಲಿ ಕಾಣಿಸಿಕೊಂಡಿದ್ದ ವಿಚಿತ್ರ ಹುಳುಗಳ ಬಗ್ಗೆ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದು, ವಾತಾವರಣದ ವೈಪರೀತ್ಯದ ಕಾರಣದಿಂದ ಸೊಡೊಪ್ಟೆರಾ ಮೌರಿಶಿಯಾ ಎಂಬ ಪತಂಗ ಜಾತಿಗೆ ಸೇರಿದ ಮರಿ ಹಂತದ ಹುಳುಗಳು ಕಾಣಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಈ ಹುಳುಗಳು ಭೂಮಿಯಡಿಯಲ್ಲಿ ಕೋಶಾವಸ್ಥೆಗೆ ತಲುಪಿದ್ದು ಇನ್ನೂ ಏಳೆಂಟು ದಿನಗಳಲ್ಲಿ ಪತಂಗವಾಗಿ ಹೊರ ಬರುವ ಹಿನ್ನಲೆಯಲ್ಲಿ ಹುಳು ಬಾಧಿತ ಪ್ರದೇಶಕ್ಕೆ ಸೋಲಾ ಲೈಟ್ರಾಪ್ (ಬೆಳಕಿನ ಬಲೆ) ಅಳವಡಿಸಲಾಗಿದೆ.
ಅಸಾನಿ ಚಂಡ ಮಾರುತದ ಪ್ರಭಾವದಿಂದಾಗಿ ಮೇ ತಿಂಗಳಲ್ಲಿ ಉಂಟಾದ ಅಕಾಲಿಕ ಮಳೆಯಿಂದ ತಂಪಾದ ವಾತಾವರಣ ಸೃಷ್ಟಿಯಾದ ಹಿನ್ನಲೆಯಲ್ಲಿ ಬಾರೀ ಪ್ರಮಾಣದಲ್ಲಿ ಈ ಹುಳುಗಳು ಉಂಟಾಗಲು ಕಾರಣವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು, ಮಳೆ ನಿಂತ ಬಳಿಕ ಇವು ಹುಳುಗಳಾಗಿ ಪರಿವರ್ತನೆಯಾಗಿದ್ದು ಆದಷ್ಟು ತಂಪಾದ ವಾತಾವರಣದತ್ತ ಈ ಹುಳುಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಬಳಿಕ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಹುಳು ಬಾಧಿತ ಪ್ರದೇಶದಲ್ಲಿ ಕೀಟನಾಶಕ ಸಿಂಪಡಣೆ ಮಾಡಿ ಸ್ವಲ್ಪ ನಿಯಂತ್ರಕ್ಕೆ ತರಲಾಗಿತ್ತು. ಹುಳುಗಳಾಗಿ ಪರಿವರ್ತನೆ ಆದ ಸಂದರ್ಭದಲ್ಲಿ ಇನ್ನೂ ಒಂದೆರಡು ದಿನ ಮಳೆಯಾದಲ್ಲಿ ಈ ಮಳೆಗೆ ಹುಳುಗಳು ಸಂಪೂರ್ಣ ಕೊಚ್ಚಿ ಹೋಗುತ್ತಿದ್ದವು ಎಂದು ಈ ಬಗ್ಗೆ ಅಧ್ಯಯನಕ್ಕೆ ಬಂದ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರವಿಜ್ಞಾನಿ ಡಾ. ರೂಪಾ ಪಾಟೀಲ್ ವಿವರಿಸಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಂತಹ ಸ್ಥಳದಲ್ಲಿ ಸೋಲಾರ್ ಲೈಟ್ಯಾಪ್ (ಬೆಳಕಿನ ಬಲೆ) ಅಳವಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಮದಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ನಾಯ್ಕ, ಉಪಾಧ್ಯಕ್ಷ ರವಿ ದುರ್ಗೇಕರ, ಸದಸ್ಯ ಪುರುಷೋತ್ತಮ ಗೌಡ, ಪಿಡಿಓ ನಾಗೇಂದ್ರ ನಾಯ್ಕ, ಕೃಷಿ ಇಲಾಖೆಯ ಉಪಕೃಷಿ ನಿದೇರ್ಶಕ ಶಿವಪ್ರಸಾದ ಗಾಂವಕರ, ಕೃಷಿ ಅಧಿಕಾರಿ ಆಶಾ ರಾಥೋಡ, ತಾಲೂಕ ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ ಇದ್ದರು.