ದಾಂಡೇಲಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ. ಕಳೆದ 40 ವರ್ಷಗಳಿಂದ ಸಮಸ್ಯೆಗಳು ಪರಿಹಾರವಾಗದೇ, ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದ್ದು, ಆ ಕಾರಣಕ್ಕಾಗಿ ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ಅವರು ನಗರದ ಬಂಗೂರನಗರದ ಡಿಲಕ್ಸ್ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳು ಸಾಕಷ್ಟಿದ್ದು, ಅವುಗಳ ಪರಿಹಾರಕ್ಕೆ ಅರ್ಹ ಪ್ರತಿನಿಧಿಯ ಆಯ್ಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಈ ಬಾರಿ ಹೊಸ ಮುಖಕ್ಕೆ ಅವಕಾಶವನ್ನು ನೀಡಲಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈಗಾಗಲೆ ಸುತ್ತಾಡಿದ್ದೇನೆ. ಶಿಕ್ಷಕ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿರುವ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ನನಗೊಂದು ಅಮೂಲ್ಯ ಅವಕಾಶ ನೀಡಿ ಶಿಕ್ಷಣ ಕ್ಷೇತ್ರವನ್ನು ಬಲವರ್ಧನೆಗೊಳಿಸಲು ಅನುವು ಮಾಡಿಕೊಡಬೇಕೆಂದು ಬಸವರಾಜ ಗುರಿಕಾರ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ವಿ.ಆರ್.ಹೆಗಡೆ, ನಗರಸಭಾ ಸದಸ್ಯ ಮಹಾದೇವ ಜಮಾದಾರ, ಕಾಂಗ್ರೆಸ್ ಮುಖಂಡರುಗಳಾದ ದಾದಾಪೀರ್ ನದೀಮುಲ್ಲಾ, ಲಿಂಗರಾಜ ಹುದ್ಲಿ, ಪ್ರಭುದಾಸ, ಸದ್ದಾಂ ಬಾಳೆಕುಂದ್ರಿ, ಪ್ರಕಾಶ ಮೊದಲಾದವರು ಇದ್ದರು.