ಭಟ್ಕಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳೀಯ ಸಂಸ್ಥೆ ಹಾಗೂ ಸ್ನೇಹ ವಿಶೇಷ ಶಾಲೆ ಸಹಭಾಗಿತ್ವದಲ್ಲಿ ಬೇಸಿಗೆ ಶಿಬಿರವು ಸ್ನೇಹ ವಿಶೇಷ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಕಾರ್ಯದರ್ಶಿ ಬಿ.ಡಿ.ಫರ್ನಾಂಡಿಸ್ ಉದ್ಘಾಟಿಸಿ ಮಾತನಾಡಿ, ಭಟ್ಕಳದ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಸಮವಸ್ತ್ರ ಧರಿಸಿ ಶಿಸ್ತು ಮತ್ತು ನಿಯಮಗಳನ್ನು ಪಾಲನೆ ಮಾಡಿ, ಸಾಮಾನ್ಯ ವಿದ್ಯಾರ್ಥಿಗಳಿಗೆ ತಾವು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟರು ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಎಎಸ್ಓಸಿ ಅಧಿಕಾರಿ ಕರಿ ಸಿದ್ದಪ್ಪ, ಭಟ್ಕಳ ಘಟಕದ ಕಾರ್ಯದರ್ಶಿ ವೆಂಕಟೇಶ ಗುಬ್ಬಿಹಿತ್ಲು, ಸ್ನೇಹ ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ನೃತ್ಯ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಯಿತು. ಶಿಬಿರದಲ್ಲಿ ಸ್ನೇಹ ಶಾಲೆಯ ವಿಶೇಷ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರ ಧರಿಸಿ ಧ್ವಜ ವಂದನೆ, ಶೇಕ್ ಹ್ಯಾಂಡ್ ಮುಂತಾದ ನಿಯಮಗಳನ್ನು ಪಾಲಿಸಿ ಗಮನ ಸೆಳೆದರು.