ಅಂಕೋಲಾ: ಸಾಧನೆಗಳ ನಿರೀಕ್ಷೆ ಮಾಡದೇ ತಾವು ಮಾಡುವ ಕಾರ್ಯ ಪ್ರಾಮಾಣಿಕವಾಗಿದ್ದರೆ ನಮಗೆ ತಿಳಿಯದಂತೆ ನಾವು ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತೇವೆ. ತಮ್ಮ ವೃತ್ತಿಗೆ ಪ್ರಾಮಾಣಿಕ ಸೇವೆ ಪ್ರತಿಯೊಬ್ಬರು ಸಲ್ಲಿಸಿದಾಗ ಇಡೀ ಸಮಾಜವೇ ಉನ್ನತ ಸ್ಥರದಲ್ಲಿರುತ್ತದೆ ಎಂದು ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ನಾಯಕ ಹೇಳಿದರು.
ಅವರು ಮಂಗಳವಾರ ನಿವೃತ್ತಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದವರು ಅವರನ್ನು ಸನ್ಮಾನಿಸಿ ಗೌರವಿಸಿದರು
.
ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, 2007ರಲ್ಲಿ ಕಾಲೇಜು ನೂತನವಾಗಿ ಆರಂಭಗೊಂಡಾಗ ಸಾಕಷ್ಟು ಸಮಸ್ಯೆಗಳಿದ್ದವು. ಆದರೆ ಇಂದು ಸ್ವಂತ ಕಟ್ಟಡದ ಜೊತೆಗೆ ಮೂಲಭೂತ ಸೌಲಭ್ಯ ಹೊಂದಿದೆ. 2017ರಲ್ಲಿ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮ ನಡೆಸಲು ಪ್ರಾಚಾರ್ಯ ಡಾ.ಎಸ್.ವಿ.ನಾಯಕ ಅವರ ಸಹಕಾರ ಸ್ಮರಣೀಯವಾದದ್ದು ಎಂದರು.
ಹಳೆಯ ವಿದ್ಯಾರ್ಥಿನಿ ಪಲ್ಲವಿ ಶೆಟ್ಟಿ ಮಾತನಾಡಿ, ಕಾಲೇಜಿಗೆ ಸ್ಫೂರ್ತಿದಾಯಕವಾಗಿದ್ದ ಎಸ್.ವಿ. ನಾಯಕ ಅವರು ನಿವೃತ್ತಿ ಹೊಂದುತ್ತಿರುವುದು ಬೇಸರವೆನಿಸಿದರೂ ಇದು ಅನಿವಾರ್ಯ ಕೂಡ. ಇವರ ಬದುಕು ಉತ್ತಮವಾಗಿರಲಿ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕಿ ಜ್ಯೋತಿ ನಾಯಕ, ಖಜಾಂಚಿ ಸಿಮಿತಾ ನಾಯ್ಕ, ಸದಸ್ಯ ನಾಗರಾಜ ನಾಯ್ಕ ಅಜ್ಜಿಕಟ್ಟಾ, ಉಪನ್ಯಾಸಕರಾದ ಡಾ. ಗೀತಾ ನಾಯಕ, ಶಾರದಾ ಭಟ್, ಎನ್.ಎಂ. ಖಾನ್, ಶಬಾನಾ ಶೇಖ್, ವಿಜಯಶ್ರೀ ಗಾಂವಕರ ಸೇರಿದಂತೆ ಇತರರಿದ್ದರು.