ದಾಂಡೇಲಿ :ಇನ್ನೊಬ್ಬರ ಜೀವ ಉಳಿಸಲು ನೆರವಾಗುವಂತಹ ಮತ್ತು ರೋಗಿಯ ಪಾಲಿಗೆ ಮಾತೃಸ್ವರೂಪಿ ರೂಪದಲ್ಲಿ ಸೇವೆ ಸಲ್ಲಿಸಬಹುದಾದ ಅತ್ಯಂತ ಪವಿತ್ರ ವೃತ್ತಿಯೆ ನರ್ಸಿಂಗ್ ವೃತ್ತಿ. ವಿಫುಲವಾದ ಉದ್ಯೋಗದ ಅವಕಾಶವನ್ನು ಹೊಂದಿರುವ ನರ್ಸಿಂಗ್ ಕಲಿಕೆಯಿಂದ ಜೀವನದ ಭದ್ರತೆ ನಿಶ್ಚಿತ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಮರಿಯಾ ಕ್ರಿಸ್ತರಾಜು ಹೇಳಿದರು
ದಾಂಡೇಲಿ ಸಮೀಪದ ಹಸನ್ಮಾಳದಲ್ಲಿರುವ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ 13ನೇ ಬ್ಯಾಚ್ ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವು ನಗರದ ಹಳೆದಾಂಡೇಲಿಯ ಹಾರ್ನ್ಬಿಲ್ ಸಭಾಭವನದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸೇವೆಯ ಮೂಲಕ ವೃತ್ತಿ ಮಾಡಬಹುದಾದ ನರ್ಸಿಂಗ್ ಕ್ಷೇತ್ರಕ್ಕೆ ಜಗತ್ತಿನೆಲ್ಲೆಡೆ ಗೌರವವಿದೆ. ನರ್ಸಿಂಗ್ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣದ ರೂವಾರಿಗಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹುಬ್ಬಳ್ಳಿ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಸಂಜಯ್ ಎಂ.ಪೀರಾಪುರ, ಕೆ.ಎಲ್.ಇ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸೋಲಿಲ್ಲ. ಅವಕಾಶಗಳು ಅರಸಿ ಬರುತ್ತವೆ. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ನರ್ಸಿಂಗಿಗೆ ಸಾಕಷ್ಟು ಬೇಡಿಕೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಲು ನರ್ಸಿಂಗ್ ಕಲಿಕೆ ಮಹತ್ವದ ವೇದಿಕೆ ಎಂದರು.
13ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ನಡೆದ ಪ್ರತಿಜ್ಞಾವಿಧಿ ಬೋಧನೆ ಅರ್ಥಪೂರ್ಣವಾಗಿ ಜರುಗಿತು. ಕಾಲೇಜಿನ ಪ್ರಾಚಾರ್ಯ ವಿನಾಯಕ ಪಾಟೀಲ ಅವರು ಸ್ವಾಗತಿಸಿದ ಕರ‍್ಯಕ್ರಮಕ್ಕೆ ಶೈಲಾ ಗುತ್ತಲ ವಂದಿಸಿದರು. ರಾಜಿಕಾ ಮತ್ತು ನಕುಶಾ ನಾಯ್ಕ ಕಾರ‍್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಸುಂಕದ ಸಹಕರಿಸಿದರು.