ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ, ಸೋಂದಾ ಗ್ರಾಮದಲ್ಲಿರುವ ಮುಂಡಿಗೆ ಕೆರೆ ಪಕ್ಷಿಧಾಮಕ್ಕೆ ಬೆಳ್ಳಕ್ಕಿಗಳು ಹಿಂಡು ಹಿಂಡಾಗಿ ಬಂದಿಳಿಯುತ್ತಿವೆ.ಇದು ಮುಂಗಾರಿನ ಆಗಮನಕ್ಕೆ ಮುನ್ಸೂಚನೆಯಾಗಿದೆ.
ಸೋಂದಾ ಜಾಗೃತ ವೇದಿಕೆ (ರಿ.)ಯು 1995 ರಿಂದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ದಿವ್ಯ ಮಾರ್ಗದರ್ಶನದಲ್ಲಿ ಮುಂಡಿಗೆಕೆರೆ ಪಕ್ಷಿಧಾಮದ ಆಗು ಹೋಗುಗಳನ್ನು ತೀರಾ ಸನಿಹದಿಂದ, ದಾಖಲಿಸುತ್ತಾ ಬಂದಿದೆ . ಇದುವರೆಗಿನ ದಾಖಲೆ ಪ್ರಕಾರ ಬೆಳ್ಳಕ್ಕಿಗಳು ಮುಂಡಿಗೆ ಕೆರೆಗೆ ಇಳಿದು ಒಂದು ದಿನ ವಸತಿ ಮಾಡಿದರೆ ಅಲ್ಲಿಂದ 5/6 ದಿನಗಳಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗಿದ್ದು ದಾಖಲೆ ಆಗಿದೆ.
ಬೆಳ್ಳಕ್ಕಿಗಳು ವರ್ಷ ಮೇ ತಿಂಗಳ 13ರಿಂದಾ ಕೆರೆ ಸಮೀಕ್ಷೆ ಮಾಡುತ್ತಾ ಬಂದಿವೆ.ದಿನಾಲೂ ಮುಂಜಾನೆ ಹಾಗೂ ಸಂಜೆ ಕೆರೆಯ ಮೇಲ್ಗಡೆ ಹಾರಾಟ ಮಾಡಿ ಕೆರೆಯಲ್ಲಿಯ ಸ್ಥಿತಿ–ಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದು, ಮೇ 31 ರಂದು ಸಂಜೆ ಸುಮಾರು 100 ಕ್ಕೂ ಅಧಿಕ ಬೆಳ್ಳಕ್ಕಿಗಳು ಕೆರೆಯಲ್ಲಿಇಳಿದಿರುವದು ಕಂಡು ಬಂತು.ಆದರೆ ಸಂಜೆ 7.20ರ ವೇಳೆಗೆ ಕೆಲವೊಂದು ಹಾರಿ ಹೋಗಿದ್ದು, ಸುಮಾರು 60ರಿಂದ 70 ಪಕ್ಷಿಗಳು ಕೆರೆಯಲ್ಲಿ ವಸತಿ ಮಾಡಿವೆ.ಇದು ಈ ವರ್ಷದ ಮುಂಗಾರು ಮಳೆ ಆಗಮನದ ಮುನ್ಸೂಚನೆ ಆಗಿದೆ.ಕಾರಣ ಇನ್ನು 5/6 ದಿನಗಳಲ್ಲಿ ಉತ್ತಮ ಮಳೆ ಪ್ರಾರಂಭವಾಗುತ್ತದೆ.ಸುಮಾರು 1980 ರ ವೇಳೆಗೆ ಕರ್ನಾಟಕದ ಖ್ಯಾತ ಪಕ್ಷಿ ತಜ್ಞ ದಿ//, ಪಿ.ಡಿ.ಸುದರ್ಶನ್. ಮುಂಡಿಗೆ ಕೆರೆಗೆ ಬೆಳ್ಳಕ್ಕಿಗಳು ಮಳೆಗಾಲದಲ್ಲಿ ಆಗಮಿಸಿ , ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟುತ್ತವೆ ಎಂಬುದನ್ನು ಪ್ರಪ್ರಥಮವಾಗಿ ಹೊರಜಗತ್ತಿಗೆ ಪರಿಚಯಿಸಿದರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಿಗೆ ಗಿಡಗಳ ಮೇಲೆ ಪಕ್ಷಿಗಳ ವಂಶಾಭಿವೃದ್ಧಿ ತಾಣ ಇದೊಂದೇ ಆಗಿದೆ , ಎಂಬುದು ಉಲ್ಲೇಖನೀಯ.
ಚಿತ್ರ ಕೃಪೆ – ಪ್ರಸಾದ್ ಹೆಗಡೆ ವಾಜಗದ್ದೆ. ಸೋಂದಾ
ಮಾಹಿತಿ:-ರತ್ನಾಕರ ಹೆಗಡೆ ಬಾಡಲಕೊಪ್ಪ ಸೋಂದಾ.