ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಬೈಲಂದೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಮೂರು ಕೆರೆಗಳ ಕಾಮಗಾರಿಯನ್ನು ನಡೆಸಲಾಗಿದ್ದು, ಬಡ ಕಾರ್ಮಿಕರಿಗೆ ಕೆಲಸ ನೀಡದೇ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಸಿದ ಬಗೆಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ತಾಲೂಕು ಪಂಚಾಯಿತಿ ಇಒ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಬೈಲಂದೂರಿನ ದೊಡ್ಡಕೆರೆ, ಫಾರೆಸ್ಟ್ ಕೆರೆ ಹಾಗೂ ಗೌಳಿವಾಡ ಸಮೀಪ ಕೆರೆ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಕಾಮಗಾರಿಯನ್ನು ಜೆಸಿಬಿ, ಟ್ರ್ಯಾಕ್ಟರ್ ಇತ್ಯಾದಿ ಯಂತ್ರಗಳನ್ನು ಬಳಸಿ ಮಾಡಲಾಗಿದೆ. ಕಾಮಗಾರಿಯೂ ಕಳಪೆಯಾಗಿದೆ. ಯೋಜನೆಯ ನಿಯಮದಂತೆ ಕೂಲಿಕಾರ್ಮಿಕರಿಗೆ ಕೆಲಸ ನೀಡಿಲ್ಲ. ಈ ಕಾರ್ಯದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಶಾಮೀಲಾಗಿದ್ದಾರೆ.
ಗ್ರಾಮಸ್ಥರು ದೂರು ನೀಡುವ ವಿಚಾರ ತಿಳಿಯುತ್ತಿದ್ದಂತೆ ಜೆಸಿಬಿಯಲ್ಲಿ ಮಾಡಿದ ಕಾರ್ಯವನ್ನು ಸ್ವತಃ ಕಾರ್ಮಿಕರಿಂದಲೇ ಮಾಡಿಸಿದಂತೆ ತೇಪೆ ಹಾಕುವ ಕಾರ್ಯವನ್ನೂ ಮಾಡಲಾಗುತ್ತಿದೆ. ಈ ಬಗೆಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಂಡು ಜನರಿಗೆ ನ್ಯಾಯ ದೊರಕಿಸಿಕೊಡುವಂತೆ ಗ್ರಾಮಸ್ಥರಾದ ಉದಯ ಮಿರಾಶಿ, ರಾಜಾರಾಮ ಯಾದವ, ಸುರೇಶ ಸೋಮಾಪುರಕರ್ ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿದ ಇಒ ಜಗದೀಶ ಕಮ್ಮಾರ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.