ಅಂಕೋಲಾ: ತಾಲೂಕಿನ ಕಂಚಿನಬಾಗಿಲ-ಬೊಗ್ರಿಬೈಲ್ ಸರಹದ್ದು ಪ್ರದೇಶದಲ್ಲಿ ಲಾರಿಯೊಂದು ಬೈಕ್ ಗೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೀರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಅಗಸೂರ ನಿವಾಸಿಗಳಾದ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಮೃತ ದುರ್ದೈವಿಗಳಾಗಿದ್ದಾರೆ.
ಲಾರಿ ಚಾಲಕ ಬೈಕ್ ಗೆ ಜೋರಾಗಿ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದ ಎನ್ನಲಾಗಿದ್ದು, ಬೈಕ್ ಸವಾರರಿಬ್ಬರೂ ಲಾರಿಯ ಚಕ್ರದಡಿ ಸಿಲುಕಿ ಸುಮಾರು ಹತ್ತಿಪ್ಪತ್ತು ಮೀಟರ್ ನಷ್ಟು ದೂರ ತಳ್ಳಲ್ಪಟ್ಟಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಬೈಕ್ ಸವಾರರ ಅಜಾಗರೂಕ ಚಾಲನೆ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಅಪಫಾತ ಪಡಿಸಿದ ಲಾರಿ ಚಾಲಕ ತನ್ನ ಲಾರಿ ಬಿಟ್ಟು ಸ್ಥಳದಿಂದ ಓಡಿ ಹೋಗಿ ಪರಾರಿಯಾಗಿದ್ದಾನೆ. ಸಿಪಿಐ ಸಂತೋಷ್ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 112 ತುರ್ತು ವಾಹನ ಹಾಗೂ ಪೊಲೀಸ್ ಸಿಬ್ಬಂದಿಗಳು ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಇತರೆ ವಾಹನಗಳಿಗೆ ಹೆದ್ದಾರಿ ಸಂಚಾರ ಸುಗಮಗೊಳಿಸಲು ಕರ್ತವ್ಯ ನಿರ್ವಹಿಸಿದರು.