ಮುಂಡಗೋಡ: ಚಿಗಳ್ಳಿ ಗ್ರಾಮದ ಹುಲಿಗೆಮ್ಮ ದೇವಿ ಗ್ರಾಮೀಣ ಅಭಿವೃದ್ಧಿ ವಿದ್ಯಾ ಸಂಸ್ಥೆಯಿಂದ ಬಾಲವಾಡಿ ಮಕ್ಕಳು ಒಳಗೊಂಡಂತೆ 1ರಿಂದ 5ನೇ ತರಗತಿ ಬಡ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ, ನೋಟ್‌ಬುಕ್, ಸ್ಕೂಲ್‌ಬ್ಯಾಗ್ ಹಾಗೂ ಎರಡು ಜೊತೆ ಬಟ್ಟೆ ವಿತರಣೆ ಮಾಡಲಾಯಿತು.
ಶಿಗ್ಗಾಂವ ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವನಗೌಡ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಪಠ್ಯ ಪುಸ್ತಕ ಪಠ್ಯ ಪುಸ್ತಕ, ನೋಟ್‌ಬುಕ್, ಸ್ಕೂಲ್‌ಬ್ಯಾಗ್ ಹಾಗೂ ಎರಡು ಜೊತೆ ಬಟ್ಟೆ ವಿತರಣೆ ಮಾಡಿ ಮಾತನಾಡಿ, ಚಿಗಳ್ಳಿ ಗ್ರಾಮದ ಹುಲಿಗೆಮ್ಮ ದೇವಿ ಗ್ರಾಮೀಣ ಅಭಿವೃದ್ಧಿ ವಿದ್ಯಾ ಸಂಸ್ಥೆಯು ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸದುದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತವನ್ನು ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ. ಅಲ್ಲದೆ ಮಕ್ಕಳಿಗೆ ಉಚಿತ ಉತ್ತಮವಾದ ಶಿಕ್ಷಣ ನೀಡಿ ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸುತ್ತಿರುವುದು ಉತ್ತಮವಾದ ಸಮಾಜಸೇವೆಯಾಗಿದೆ. ಚಿಗಳ್ಳಿ ಗ್ರಾಮದ ಹುಲಿಗೆಮ್ಮ ದೇವಿ ಗ್ರಾಮೀಣ ಅಭಿವೃದ್ಧಿ ವಿದ್ಯಾ ಸಂಸ್ಥೆಯು ಉಚಿತವಾಗಿ ಅಕ್ಷರ ಜ್ಞಾನ ನೀಡುವ ಕಾರ್ಯಕ್ಕೆ ನಾವು ಕೈಜೋಡಿಸಿ ಸಹಾಯ ಮಾಡುತ್ತೇವೆ. ಸಂಸ್ಥೆಯ ಅಭಿವೃದ್ದಿಗೆ ಕೈಜೋಡಿಸುತ್ತೇವೆ ಎಂದರು.
ಶಿಗ್ಗಾಂವ್ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರಾದ ಶಂಕರಗೌಡ ಪಾಟೀಲ ಮಾತನಾಡಿ, ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಿರ್ವಹಣೆ ಮಾಡಬೇಕೆಂದರೆ ಶಿಕ್ಷಣ ಬಹಳ ಮುಖ್ಯ. ಬಡ ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯ ನಿರ್ದೇಶಕರಿಗೆ, ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ನಾವು ಸಹ ಸಹಾಯ ಮಾಡಲು ಸದಾ ಸಿದ್ಧ ಎಂದು ಹೇಳಿದರು.
ನಮ್ಮ ವಿದ್ಯಾ ಸಂಸ್ಥೆಗೆ ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಮಕ್ಕಳಿಗೆ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ನಮ್ಮ ವಿದ್ಯಾಸಂಸ್ಥೆಯಲ್ಲಿ ಬಾಲವಾಡಿ ಮಕ್ಕಳು 15 ಹಾಗೂ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು 50 ಜನರು ಇದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಮಂಜುನಾಥ ವಡ್ಡರ ಹೇಳಿದರು.
ಈ ಸಂದರ್ಭದಲ್ಲಿ ಶಿಗ್ಗಾಂವ ತಾಲೂಕಿನ ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ಹನಮಂತಪ್ಪ ಗುಳೇದ, ಶಿಗ್ಗಾಂವ ತಾಲೂಕ ಎಸ್.ಸಿ ಮೋರ್ಚಾ ಅಧ್ಯಕ್ಷ ಹನಮಂತಪ್ಪ ಮಾದರ, ಕೋಶಾಧ್ಯಕ್ಷ ಸುರೇಶ ಮುಡೆನ್ನವರ, ಕಾರ್ಯದರ್ಶಿ ಸಂಜು ಕೆಳಗೇರಿ, ನಿಂಗಣ್ಣ ಶಿಗ್ಗಾಂವ ಹಾಗೂ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ವಡ್ಡರ, ಸದಸ್ಯ ರಾಜಕುಮಾರ ಕಾಶಿಯವರ, ಷಣ್ಮುಖಪ್ಪ ಕಂಟೆಪ್ಪನವರ, ಶಾಲೆಯ ಶಿಕ್ಷಕಿಯರಾದ ಪ್ರಭಾವತಿ, ಚೆನ್ನಮ್ಮ, ರೇಖಾ ಹಾಗೂ ಸಂಸ್ಥೆಯ ವರ್ಗದವರು ಹಾಜರಿದ್ದರು.