ಬನವಾಸಿ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಖಂಡ್ರಾಜಿ ಗ್ರಾಮದಲ್ಲಿ ವರದಿಯಾಗಿದೆ.
ಸಮೀಪದ ಭಾಶಿ ಗ್ರಾಮದ ಮೃತ್ಯುಂಜಯ ಮಡಿವಾಳ ಎಂಬ ರೈತನ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನಾಲ್ಕು ವರ್ಷದ ಅಡಿಕೆ ಗಿಡಗಳ ತೋಟಕ್ಕೆ ಸೋಮವಾರ ಮಧ್ಯಾಹ್ನ ಸುಮಾರು 3.30ರ ಸುಮಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದ ತಕ್ಷಣ ತೋಟಕ್ಕೆ ಧಾವಿಸಿದ ರೈತ ಅಕ್ಕಪಕ್ಕದವರ ಸಹಾಯದೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು.
ಈ ದುರ್ಘಟನೆಯಲ್ಲಿ ತೋಟದಲ್ಲಿನ 2 ಲಕ್ಷ ರೂ. ಮೌಲ್ಯದ ಪಿವಿಸಿ ಪೈಪ್‌ಗಳು ಸುಟ್ಟು ಹೋಗಿವೆ. ಅಲ್ಲದೇ ನಾಲ್ಕು ವರ್ಷದ 1,300 ಅಡಿಕೆ ಗಿಡಗಳು ಸುಟ್ಟು ಹೋಗಿವೆ.
ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ವಿಷಯವನ್ನು ಕಂದಾಯ ಇಲಾಖೆಯ ಗಮನಕ್ಕೆ ತರಲಾಗಿದ್ದು ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ರೈತ ಮೃತ್ಯುಂಜಯ ಮಡಿವಾಳ ಬೇಸರ ವ್ಯಕ್ತ ಪಡಿಸಿದ್ದಾರೆ. ಕಷ್ಟಪಟ್ಟು ಬೆಳೆಸಿದ ಅಡಿಕೆ ಗಿಡಗಳು ಬೆಂಕಿಗೆ ಆಹುತಿಯಾಗಿರುವುದನ್ನು ಕಂಡು ಬಡ ರೈತ ಕಣ್ಣೀರಿಡುತ್ತಿದ್ದಾನೆ.