ಯಲ್ಲಾಪುರ: ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಆಹಾರ ಬೆಳೆ ಬಿಟ್ಟು ವಾಣಿಜ್ಯ ಬೆಳೆ ಬೆಳೆಯಲು ಒತ್ತುಕೊಟ್ಟು ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೃಷಿಯನ್ನು ಬಿಟ್ಟು ನಿರ್ಮಾಣ ವಲಯ ನಂಬಿಕೊಂಡು ಕಾರ್ಮಿಕರು ಬದುಕಲಾರಂಭಿಸಿದರು. ಆದರೆ,ಕಾರ್ಮಿಕರು ಅಭದ್ರತೆ, ಅಸುರಕ್ಷತೆಯಲ್ಲಿ ಬದುಕುತ್ತಿದ್ದಾರೆ.ಇವರಿಗೆ ಕೆಲಸದ ಸ್ಥಳದಲ್ಲಿ ಜೀವನದ ಭದ್ರತೆ,ಆರ್ಥಿಕ ಸುರಕ್ಷತೆ ಒದಗಿಸಬೇಕು ಎಂದು ರಾಜ್ಯ ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಆಗ್ರಹಿಸಿದರು.
ಅವರು ಮಂಗಳವಾರ ಪಟ್ಟಣದ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಉತ್ತರ ಕನ್ನಡ ಇದರ ಕಟ್ಟಡ ಕಾರ್ಮಿಕರ ಮೂರನೇಯ ಜಿಲ್ಲಾ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೋಟಬ್ಯಾನ್,ಜಿ.ಎಸ್ಟಿ ಏರಿಕೆ,ಕೊರೋನಾ ಸಂಕಷ್ಟಗಳಿಂದ ಕಾರ್ಮಿಕ ವಲಯ ನಲುಗಿ ಹೋಗಿದೆ. ಈಗ ಎಲ್ಲಾ ಕಟ್ಟಡ ಸಾಮಾಗ್ರಿಗಳ ದರ ದುಪ್ಪಟ್ಟಾಗಿದೆ.ನೇರ ಹಣ ವರ್ಗಾವಣೆ ಮಾಡಿ ಹೇಳಿದರೆ, ರಾಜ್ಯ ಸರಕಾರ ಕಿಟ್ ಗಳ ಖರೀದಿಯಲ್ಲಿ ನಿರತವಾಗಿದೆ.ಕಾನೂನು ಉಲ್ಲಂಘಿಸಿ ಕಾರ್ಮಿಕರಿಗೆ ಸೌಲಭ್ಯದ ಹೆಸರಲ್ಲಿ ಖರೀದಿಯಲ್ಲಿ ತೊಡಗಿಸಿಕೊಂಡಿದೆ.ಸರಕಾರ ಖರೀದಿಯನ್ನು ನಿಲ್ಲಿಸಿ,ಕಾರ್ಮಿಕರ ಖಾತೆಗೆ ಹಣ ಹಾಕಿ.
ಕಾರ್ಮಿಕ ಮಂಡಳಿಯ ಖರೀದಿಗಳಲ್ಲಿ ಅವ್ಯವಹಾರವಾಗಿದ್ದು,ಈ ಬಗ್ಗೆ ತನಿಖೆ ಆಗಬೇಕು.ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಜುಲೈನಲ್ಲಿ ಸಮ್ಮೇಳನ ನಡೆಸಿ ಸರಕಾರವನ್ನು ಎಚ್ಚರಿಸಲಾಗುತ್ತದೆ. ಕಾರ್ಮಿಕ ಇಲಾಖೆ ಅಧಿಕಾರಿಗಳ ಬಗ್ಗೆ,ಸಚಿವರ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ.ಕಾರ್ಮಿಕ ಹಿತಾಸಕ್ತಿಗಾಗಿ ನಮ್ಮ ಹೋರಾಟ ಎಂದರು.
ರಾಜ್ಯ ಉಪಾಧ್ಯಕ್ಷರಾದ ಹರೀಶ ನಾಯ್ಕ, ಉಡುಪಿಯ ಬಾಲಕೃಷ್ಣ ಶೆಟ್ಟಿ,ಸಿಐಟಿಯು ಪ್ರಮುಖ ನಾಗಪ್ಪ ನಾಯ್ಕ,ಅಂಗನವಾಡಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ಜಯಶ್ರೀ ಹಿರೇಕರ,ಉಪಸ್ಥಿತರಿದ್ದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯ್ಕ ಅಂಕೋಲಾ ಅಧ್ಯಕ್ಷತೆ ವಹಿಸಿ ಮಾತನಾಡಿ,” ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನು 1996 ಪುನರ್ ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳ ರಕ್ಷಿಸಿ. ಕಿಟ್ ಬೇಡ, ನೇರ ನಗದು ಜಮಾ ಮಾಡಬೇಕು. ಕಲ್ಯಾಣ ಮಂಡಳಿಯ ಎಲ್ಲಾ ಘೋಷಿತ ಸೌಲಭ್ಯಗಳ ಜಾರಿಗಾಗಿ, ಕಳೆದ ಐದಾರು ವರ್ಷಗಳಿಂದ ಬಾಕಿಯಿರುವ ಅರ್ಜಿಗಳ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಕೋವಿಡ್-19ರ ಹೆಸರಲ್ಲಿ ನಡೆದಿರುವ ಎಲ್ಲ ಖರೀದಿಗಳ ತನಿಖೆಗೆ ಆಗಬೇಕೆಂದು” ಆಗ್ರಹಿಸಿದರು.
ತಿಲಕ ಗೌಡ ಸ್ವಾಗತಿಸಿದರು.ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಿಐಟಿಯು ಕಾರ್ಯಕರ್ತರು ಭಾಗವಹಿಸಿದ್ದರು.