ಸಿದ್ದಾಪುರ:ತಾಲೂಕಿನ ಬೇಡ್ಕಣಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಎನ್.ಎಸ್.ಯು.ಐ ಜಿಲ್ಲಾ ಘಟಕ ಹಾಗೂ ವಿದ್ಯಾರ್ಥಿ ಗಳು ತಹಶೀಲ್ದಾರ್ ಮೂಲಕ ಶಾಸಕರಿಗೆ ಮನವಿ ನೀಡಿದರು.
ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವಿಲ್ಲದೆ ಬಹಳ ವರ್ಷಗಳಾಗಿವೆ. ಕಾಲೇಜಿನ ವಿದ್ಯಾರ್ಥಿಗಳು ಬಿಸಿಲಲ್ಲಿ ಬಸ್ ಕಾಯಬೇಕಾದ ಪರಿಸ್ಥಿತಿ ಇದೆ.ಸಮಯಕ್ಕೆ ಸರಿಯಾಗಿ ಬಸ್ಸುಗಳಿಲ್ಲ ಅದಕ್ಕಾಗಿ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಈ ವೇಳೆ ಎನ್.ಎಸ್. ಯು.ಐ ಜಿಲ್ಲಾಧ್ಯಕ್ಷ ವಿಶ್ವಗೌಡ ಮಾತನಾಡಿ, ಎನ್.ಎಸ್.ಯುಐ ಘಟಕದ ವತಿಯಿಂದ ಈಗಾಗಲೇ ಸಮಸ್ಯೆ ಪರಿಹರಿಸುವಂತೆ ಅರ್ಜಿಗಳನ್ನು ನೀಡಲಾಗಿದೆ. ಸದ್ಯದಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳು ಮಳೆಯಲ್ಲಿ ಬಸ್ ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿ ಸ್ಪಂದನೆ ಸಿಗುತ್ತಿಲ್ಲ. ತಹಶಿಲ್ದಾರ್ ಮೂಲಕ ಶಾಸಕರಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಿದ್ದು, ಮನವಿಗೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳುತ್ತೇವೆ ಎಂದರು.