ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯತಿಯ ನವಗ್ರಾಮದಲ್ಲಿ ಬರುವ ವಾರ್ಡ್ ನಂ:01 ಗ್ರಾಮ ಪಂಚಾಯತಿ ಮಟ್ಟದಲ್ಲಿ ದೊಡ್ಡ ವಾರ್ಡ್ ಆಗಿದ್ದು, ಈ ವಾರ್ಡಿನ ಜನರಿಗೆ ಕುಡಿಯುವ ನೀರಿನ ಬಹುದೊಡ್ಡ ಸಮಸ್ಯೆ ಎದುರಾಗಿದೆ. ಅಲ್ಲೆ ಕೂಗಳತೆಯ ದೂರದಲ್ಲಿ ಗ್ರಾಮ ಪಂಚಾಯತಿ ಕಚೇರಿಯಿದೆ. ಇಲ್ಲಿಯ ಜನತೆಯ ಮತ ಪಡೆದು ಅಧ್ಯಕ್ಷರಾದವರು ಇದೇ ವಾರ್ಡಿನ ಸದಸ್ಯರಾಗಿರುವುದು ವಿಶೇಷ.
ಅಂಬೇವಾಡಿ ಗ್ರಾಮ ಪಂಚಾಯತಿಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಮಾಡಲಾಗಿದ್ದರೂ, ಕುಡಿಯುವ ನೀರು ಮಾತ್ರ ಪ್ರತಿನಿತ್ಯ ಪೊರೈಕೆ ಮಾಡಲಾಗುತ್ತಿಲ್ಲ. ಎರಡು ದಿನಕ್ಕೊಮ್ಮೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕುಡಿಯುವ ನೀರು ಪೊರೈಕೆಯಾಗುತ್ತಿದ್ದು, ಸ್ಥಳೀಯ ಜನತೆಗೆ ತೀವ್ರ ತೊಂದರೆಯಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಿರುವ ಗ್ರಾಮ ಪಂಚಾಯತಿ ಅಧ್ಯಕ್ಷರ ವಾರ್ಡಿನಲ್ಲೆ ಹೀಗಾದರೆ, ಉಳಿದ ವಾರ್ಡಿನ ಪರಿಸ್ಥಿತಿ ಏನು ಎನ್ನುವ ಪ್ರಶ್ನೆ ಎದುರಾಗಿದೆ.
ಕುಡಿಯುವ ನೀರು ಅತೀ ಅವಶ್ಯ. ಅಗತ್ಯ ಮೂಲಸೌಕರ‍್ಯವೂ ಹೌದು. ಹೀಗಿರುವಾಗ ಈ ವಾರ್ಡಿಗೆ ಮಿಕ್ಕುಳಿದ ವಾರ್ಡ್ಗಳಂತೆಯೆ ಪ್ರತಿದಿನ ಸೂಕ್ತ ರೀತಿಯಲ್ಲಿ ನೀರು ಪೊರೈಕೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ಹುಂಡೇಕರ ಸೇರಿದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.