ಕಾರವಾರ:ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಡೆಗೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಭಾಗವಹಿಸಿ ಮಾತನಾಡಿದರು.
ಮನೆಯ ಸುತ್ತ ಮುತ್ತ ಸೊಳ್ಳೆಗಳ ನಿಯಂತ್ರಣ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‌ಗಳು ಪಾಲ್ಗೊಂಡು ಗ್ರಾಮೀಣ ಪ್ರದೇಶಗಳ ನೈರ್ಮಲ್ಯವನ್ನು ಕಾಪಾಡಬೇಕು ಎಂದು ಹೇಳಿದರು.
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳು ಹಾಗೂ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಡೆಂಘೀ, ಮಲೇರಿಯಾದಂಥ ಅನೇಕ ಕಾಯಿಲೆಗಳು ಹರಡುವ ಸಾಧ್ಯತೆ ಇರುವುದರಿಂದ ಗುಂಡಿಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಪೈಪುಗಳ ಸೋರುವಿಕೆಯನ್ನು ಗುರುತಿಸಿ ಸರಿಪಡಿಸಬೇಕು. ನೀರು ಸರಬರಾಜು ಮಾಡುವ ಮೊದಲು ನೀರಿಗೆ ಸರಿಯಾದ ಪ್ರಮಾಣದಲ್ಲಿ ಕ್ಲೋರಿನೇಶನ್ ಮಾಡಬೇಕು. ನೈರ್ಮಲ್ಯ ಲೈನ್ ಮತ್ತು ಸರಬರಾಜು ಲೈನ್‌ಗಳನ್ನು ಪರಿವೀಕ್ಷಣೆಗೊಳಪಡಿಸಿ ದೋಷಗಳಿದ್ದರೆ ಸರಿಪಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದರು.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೋಗವಾಹಕ ಆಶ್ರಿತ ರೋಗಗಳಾದ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾ, ಪೈಲೇರಿಯಾ ಮತ್ತು ಮಿದುಳು ಜ್ವರದ ರೋಗ ಲಕ್ಷಣ, ಹರಡುವಿಕೆ ಮತ್ತು ತಡೆಗಟ್ಟವಿಕೆ, ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಗೆ ವಲಸೆ ಬರುವಂಥ ಮೀನುಗಾರರಿಗೆ ರೋಗವಾಹಕ ಆಶ್ರಿತ ರೋಗಗಳ ಕುರಿತು ಮುಂಜಾಗ್ರತೆಯಾಗಿ ವೈದ್ಯರು ರಕ್ತ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು ಹಾಗೂ ಲಾರ್ವಹಾರಿ ಮೀನುಗಳ ನಿರ್ವಹಣೆಗಾಗಿ ಹ್ಯಾಚರಿಸ್ ಮೀನಿನ ಮರಿ ಮನೆಗಳನ್ನು ನಿರ್ಮಿಸಬೇಕು. ಜಿಲ್ಲೆಯ ನೀರಿನ ಮೂಲಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲು ಅವಶ್ಯವಿರುವ ಸಂಖ್ಯೆಯ ಮೀನುಗಳನ್ನು ಒದಗಿಸಬೇಕು ಎಂದು ಮೀನುಗಾರಿಕೆ ಇಲಾಖೆಗೆ ಸೂಚಿಸಿದರು.
ಸಾರಿಗೆ ಇಲಾಖೆಯ ಡಿಪೋಗಳಲ್ಲಿ ಉಪಯೋಗಿಸದ ಟೈರ್‌ಗಳು ಹಾಗೂ ಬಿಡಿಭಾಗಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿದ್ದು, ಅವುಗಳನ್ನು ನಿರ್ಮೂಲನೆ ಮಾಡುವುದು ಅಥವಾ ಟರ್ಪಾಲ್‌ನಿಂದ ಸೊಳ್ಳೆಗಳು ನುಸುಳದಂತೆ ಮುಚ್ಚಬೇಕು ಎಂದು ಸಾರಿಗೆ ಇಲಾಖೆಗೆ ಹೇಳಿದರು. ಶಾಲೆಗಳಲ್ಲಿ ಆರೋಗ್ಯಹ ಇಲಾಖೆಯ ಸಹಯೋಗದೊಂದಿಗೆ ಮಕ್ಕಳಿಗೆ ಲಾರ್ವಾಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಲಾರ್ವಾ ಉತ್ಪತ್ತಿ ತಾಣಗಳ ಬಗ್ಗೆ ಹಾಗೂ ಅವುಗಳ ನಾಶದ ಬಗ್ಗೆ ಮಾಹಿತಿ ನೀಡಿ ತಮ್ಮ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಿಳಿಸಿದರು.
ಸರ್ಕಾರಿ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಆಸ್ಪತ್ರೆ ಕ್ವಾರ್ಟರಸ್ಗಳಿಗೆ ನವೀಕರಣಗಳು ಇನ್ನು ಬಾಕಿ ಇರುವ ಕಾರಣ ಕೂಡಲೇ ಕೆಲಸವನ್ನು ಪೂರ್ಣಗಳಿಸಬೇಕು ಎಂದು ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾಲೂಕಾ ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.