
ಶಿರಸಿ: ಇಲ್ಲಿನ ಅಡಿಕೆ ಮಾರುಕಟ್ಟೆಯಾದ, ರೈತರ ಒಡನಾಡಿಯಾಗಿರುವ ಶಿರಸಿಯ ಪ್ರತಿಷ್ಠಿತ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘ (ಟಿಎಂಎಸ್) ತನ್ನ ಕಾರ್ಯಕ್ಷೇತ್ರ ವಿಸ್ತರಿಸಿ, ಸದ್ಯರಿಗೆ ಅನುಕೂಲ ಹೆಚ್ಚಿಸುವ ದೃಷ್ಟಿಯಿಂದ ಒಂದೇ ಸೂರಿನ ಅಡಿಯಲ್ಲಿ ದಿನಬಳಕೆಯ ವಸ್ತುಗಳ ಸುಪರ್ ಮಾರ್ಟ್ ತೆರೆಯಲು ಸಜ್ಜಾಗಿದ್ದು, ಜು.27ರ ಬೆಳಿಗ್ಗೆ 11 ಗಂಟೆಗೆ ಸಹಕಾರಿ ಸೂಪರ್ ಮಾರುಕಟ್ಟೆ ಲೋಕಾರ್ಪಣೆಗೊಳ್ಳಲಿದೆ.
ಶುಕ್ರವಾರ ಸಂಸ್ಥೆಯ ಅಧ್ಯಕ್ಷ, ಸಹಕಾರಿ ರತ್ನ ಜಿ.ಎಂ.ಹೆಗಡೆ ಹುಳಗೋಳ ಸುದ್ದಿಗೋಷ್ಠಿ ನಡೆಸಿ, ಎಂಟು ಸಾವಿರಕ್ಕೂ ಅಧಿಕ ಸದಸ್ಯ ಸಹಕಾರಿಗಳಿರುವ ಸಂಸ್ಥೆ 280 ಕೋಟಿ ರೂಪಾಯಿ ವಹಿವಾಟು ನಡೆಸಿ 6.10 ಕೋ.ರೂ. ಲಾಭಗಳಿಸಿದೆ. ಪ್ರತೀ ವರ್ಷ ಒಂದಿಲ್ಲೊಂದು ಹೊಸ ಯೋಜನೆ ನೀಡುವ ಸಂಸ್ಥೆ ಈ ಬಾರಿ ಜನರಿಗೋಸ್ಕರ ಸ್ಪರ್ಧಾತ್ಮಕ ಬೆಲೆ ಹಾಗೂ ಗುಣಮಟ್ಟದ ಸೇವೆಯಲ್ಲಿ ಸೂಪರ್ ಮಾರುಕಟ್ಟೆ ಆರಂಭಿಸುತ್ತಿದೆ ಎಂದರು.
ದಿನಸಿ, ನಿತ್ಯ ಬಳಕೆ ವಸ್ತುಗಳು, ತರಕಾರಿ, ಹಣ್ಣು, ಸ್ಟೇಶನರಿ ಸಾಮಗ್ರಿಗಳು, ಪಾತ್ರೆಗಳು, ಮಕ್ಕಳಾಟಿಕೆಗಳು, ಶೈಕ್ಷಣಿಕ ಸೌಲಭ್ಯಗಳು, ಶೃಂಗಾರ ಸಾಮಗ್ರಿಗಳು ಕೂಡ ಇರಲಿವೆ. ಒಂದು ಸೂಪರ್ ಮಾರುಕಟ್ಟೆಗೆ 30 ಸಾವಿರಕ್ಕೂ ಬಗೆ ಬಗೆಯ ಐಟಂಗಳು ಬೇಕಾಗುತ್ತವೆ. ಆದರೆ, ಜನರಿಗೆ ನಿತ್ಯ ಬೇಕಾಗುವ ವಸ್ತುಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
7,500 ಚದುರಡಿ ವಿಸ್ತೀರ್ಣದ ಕಟ್ಟಡದಲ್ಲಿ ಆಧುನಿಕ ವಿನ್ಯಾಸದಲ್ಲಿ ಸೂಪರ್ ಮಾರುಕಟ್ಟೆ ಆರಂಭಿಸಲಾಗುತ್ತಿದೆ. ಕಳೆದ ಮೇದೊಳಗೇ ಇದರ ಆರಂಭ ಆಗಬೇಕಿತ್ತು. ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಈಗಲೂ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತದೆ. ಮರಳಿ ಅಗತ್ಯ ಬಿದ್ದರೆ ಇನ್ನೊಂದು ಮಹಡಿಯಲ್ಲೂ 7,500 ಚದುರಡಿ ಇದ್ದು, ಅಲ್ಲೂ ಬಳಕೆ ಮಾಡಲಾಗುತ್ತದೆ. ನೆಲ ಮಹಡಿಯಲ್ಲಿ ಕ್ಲೀನಿಂಗ್, ಪ್ಯಾಕಿಂಗ್ ಮಾಡಲಾಗುತ್ತದೆ. ಈಗಾಗಲೇ ಟಿಎಂಎಸ್ ಕೃಷಿ ವಿಭಾಗವನ್ನೂ ನಡೆಸುತ್ತಿದೆ. ಪಶು ಆಹಾರವನ್ನೂ ತಯಾರಿಸಿ ಹೈನುಗಾರರಿಗೆ ನೀಡಲಾಗುತ್ತದೆ. ಅಡಿಕೆ ವಹಿವಾಟು ನಡೆಸಿದ ಬೆಳೆಗಾರರು ಇಲ್ಲೇ ಸಾಮಗ್ರಿ ಖರೀದಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸದಸ್ಯರ ಒತ್ತಾಯದ ಮೇರೆಗೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಸುರಕ್ಷಾ ಯೋಜನೆ, ಮಹಸೂಲು ವಿಕ್ರಿ ಪೆÇ್ರೀತ್ಸಾಹಧನ, ಮರಣೋತ್ತರ ನಿಧಿ, ಅಪಘಾತ ವಿಮೆ ಯೋಜನೆ, ಗೋದಾಮು ವ್ಯವಸ್ಥೆ, ಮೇವಚ್ಚು, ವೇ ಬ್ರಿಡ್ಜ ಕೂಡ ಇದೆ. 41 ಸದಸ್ಯರೊಂದಿಗೆ ಆರಂಭವಾದ ಸಂಸ್ಥೆ ಇಂದು 14,636 ಸದಸ್ಯರನ್ನು ಒಳಗೊಂಡಿದೆ. 58,800 ರೂ. ಇದ್ದ ಶೇರು ಬಂಡವಾಳ ಇಂದು 44.83 ಲ.ರೂ.ಗೆ ಏರಿದೆ. ಪ್ರತೀ ವರ್ಷ ಅ ವರ್ಗದ ಅಡಿಟ್ನಲ್ಲಿದೆ ಎಂದ ಹುಳಗೋಳ, 27ರ ಬೆಳಿಗ್ಗೆ 11ಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ನುಗ್ಗೆಹಳ್ಳಿ, ಸಹಕಾರಿ ನಿಬಂಧಕ ನಿಂಗರಾಜು ಎಸ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಕಾನಮುಷ್ಕಿ, ಉಪಾಧ್ಯಕ್ಷ ಎಂ.ಪಿ.ಹೆಗಡೆ ಹೊನ್ನೆಕಟ್ಟ, ನಿರ್ದೇಶಕರಾದ ಜಿ.ಎಂ.ಹೆಗಡೆ ಮುಳಖಂಡ, ಎನ್.ಡಿ.ಹೆಗಡೆ ಹಾಲೇರಿಕೊಪ್ಪ, ಆರ್.ಎಸ್.ಹೆಗಡೆ ವಾಜಗದ್ದೆ ಇದ್ದರು.