ಜೊಯಿಡಾ: ಬರ್ತಡೇ ಪಾರ್ಟಿಗೆಂದು ತೆರಳಿದ್ದ ಯುವಕನೋರ್ವ ಹಳ್ಳದ ನೀರಿನಲ್ಲಿ ಕಣ್ಮರೆಯಾಗಿರುವ ಘಟನೆ ತಾಲ್ಲೂಕಿನ ಅಣಶಿಯಲ್ಲಿ ನಡೆದಿದೆ.
ಅಣಶಿ ನಿವಾಸಿ ದಿಗಂಬರ ಮಡಿವಾಳ (23) ಕಾಣೆಯಾದ ದುರ್ದೈವಿಯಾಗಿದ್ದು, ಮೇ 29ರಂದು ಮನೆಯಿಂದ ಹೊರಗೆ ಹೋದವನು ವಾಪಸ್ಸು ಬಂದಿಲ್ಲ. ಸ್ನೇಹಿತ ಉದಯ ಪೆಡ್ನೇಕರ್ ಹುಟ್ಟುಹಬ್ಬವಿದ್ದು, ಅರಣ್ಯ ಇಲಾಖೆಯ ನೇಚರ್ ಕ್ಯಾಂಪ್ ಬಳಿ ಇರುವ ಕಾಪೋಯಿ ಹಳ್ಳದ ಬಳಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಗೆ ಹೊಗಿ ಊಟ ಮಾಡಿ ಬರುತ್ತೇನೆ ಎಂದು ಬೆಳಗ್ಗೆ ಹೋಗಿದ್ದಾನೆ ಎಂದು ಕಣ್ಮರೆಯಾದ ಯುವಕನ ತಂದೆ ದೂರು ನೀಡಿದ್ದಾರೆ.
ಪಾರ್ಟಿಯ ದಿನ ಸಂಜೆ 4 ಗಂಟೆಗೆ ಸ್ನೇಹಿತ ವಿನಾಯಕ ಪೆಡ್ನೇಕರ್ ಮನೆಯ ಬಳಿಗೆ ಬಂದು, ದಿಗಂಬರ ಹಳ್ಳದಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿದ್ದು ಎಲ್ಲರೂ ಸೇರಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದಿದ್ದಾರೆ. ಕೂಡಲೇ ಅವರೊಂದಿಗೆ ತೆರಳಿ ಹಳ್ಳದ ಬಳಿ ಹುಡುಕಾಟ ನಡೆಸಿದ್ದು ಮಗ ಪತ್ತೆಯಾಗಿಲ್ಲ. ಆತನನ್ನು ಹುಡುಕಿಕೊಡಿ ಎಂದು ಆತನ ತಂದೆ ಶಿವಾನಂದ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.