ದಾಂಡೇಲಿ: ರಜೆ ಮುಗಿಸಿ ದೂರದೂರಿನಿಂದ ಬಂದಿರುವ ಏಳು ವಿದ್ಯಾರ್ಥಿಗಳನ್ನು ಮತ್ತು ಮತ್ತವರ ಪಾಲಕರನ್ನು ಒಳಗಡೆ ಸೇರಿಸಿಕೊಳ್ಳದೇ ಮಧ್ಯಾಹ್ನ 12 ಗಂಟೆಯಿಂದ ಹೊರಗಡೆ ಕಾಯಿಸಿ, ಉಪವಾಸ ಬೀಳುವಂತೆ ಮಾಡಿದ ವಿಲಕ್ಷಣ ಘಟನೆ ನಗರದ ಅಂಬೇವಾಡಿಯ ಮೋರಾರ್ಜಿ ವಸತಿ ಶಾಲೆಯಲ್ಲಿ ಸೋಮವಾರ ನಡೆದಿದೆ.
ರಜೆ ಮುಗಿಸಿ ದೂರದ ರಾಮದುರ್ಗಾದಿಂದ ಆರು ವಿದ್ಯಾರ್ಥಿಗಳು ಮತ್ತು ಹಾವೇರಿಯಿಂದ ಒರ್ವ ವಿದ್ಯಾರ್ಥಿ ತಮ್ಮ ತಮ್ಮ ಪಾಲಕರ ಜೊತೆ ಅಂಬೇವಾಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಗೆ ಬಂದಿದ್ದಾರೆ. ಹಾಗೆ ಬಂದವರನ್ನು ಮೊರಾರ್ಜಿ ವಸತಿ ಶಾಲೆಯ ಶಿಕ್ಷಕ ವೃಂದದವರು ಪ್ರಾಚಾರ್ಯರಿಲ್ಲ ಎಂದು ಹೇಳಿ ಒಳಗಡೆ ಕರೆಸಿಕೊಳ್ಳದೇ ವಸತಿ ಶಾಲೆಯ ಹೊರಗಡೆ ಕಾಯಿಸುವಂತೆ ಮಾಡಿದ್ದಾರೆ. ಬೆಳ್ಳಂ ಬೆಳಗ್ಗೆ ದೂರುದೂರುಗಳಿಂದ ಹೊರಟು ಬಂದಿರುವ ವಿದ್ಯಾರ್ಥಿಗಳು 12 ಗಂಟೆಗೆ ಮುಟ್ಟಿದರಾದರೂ ಮಧ್ಯಾಹ್ನದ ಊಟವಿಲ್ಲದೇ ಉಪವಾಸ ಬೀಳುವಂತಾಗಿದೆ.
ಪ್ರಾಚಾರ್ಯರು ಮೀಟಿಂಗ್ ನಿಮಿತ್ತ ಹೊರಗಡೆ ಹೋಗಿದ್ದಾರೆ. ಅವರಿಗೆ ಮೊಬೈಲ್ ಕರೆ ಮಾಡಿದರೇ ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಪಾಲಕರದ್ದಾಗಿದೆ. ಒಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ರಾಜ್ಯ ಸರಕಾರಕ್ಕೆ ದಾಂಡೇಲಿಯ ಮೊರಾರ್ಜಿ ವಸತಿ ಶಾಲೆಯು ವಿದ್ಯಾರ್ಥಿಗಳ ಮನಸ್ಸನ್ನು ಘಾಸಿಗೊಳಿಸಲು ಹೊರಟಿರುವುದು ಮಾತ್ರ ವ್ಯಾಪಾಕ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೆ ವಿದ್ಯಾರ್ಥಿಗಳನ್ನು ಒಳಗಡೆ ಸೇರಿಸಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷರಾದ ವಿಷ್ಣು ನಾಯರ್ ಅವರು ಆಗ್ರಹಿಸಿದ್ದಾರೆ.