ಯಲ್ಲಾಪುರ: ಕ್ರೀಡೆ ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯ ಬಲವರ್ಧನೆಗೆ ಕಾರಣವಾಗುತ್ತದೆ, ನಿರಂತರ ಕ್ರೀಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ಆರೋಗ್ಯವಂತರಾಗಿರುತ್ತಾರೆ ಎನ್ನುವುದಕ್ಕೆ ಇಲ್ಲಿನ ಡಿಸಿಎಫ್ ಕಚೇರಿಯ ನೌಕರರಾಗಿರುವ 54 ವರ್ಷದ ಭಾವೇಶ್ವರ ಎಮ್ ಪಾಟೀಲ್ ಸಾಕ್ಷಿಯಾಗಿದ್ದಾರೆ.
ಬ್ಯಾಡ್ಮಿಂಟನ್ ಆಟವನ್ನು ಕಳೆದ ಮೂರು ದಶಕದಿಂದ ದೇವರಂತೆ ಪೂಜಿಸುತ್ತಿರುವರು ಅವರು, ಅದರಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ವಯಸ್ಸಿನಲ್ಲಿ ಕೂಡ ಆಡಲು ತೊಡಗಿದರೆಂದರೆ ನಿರಂತರವಾಗಿ 3ರಿಂದ 5 ಸೆಟ್ ದಣಿಯದೇ ಆಡುತ್ತಾರೆ.
ಮೂರು ದಶಕಗಳ ಹಿಂದೆ ಕಾಲೇಜು ದಿನಗಳಲ್ಲಿ ಹುಟ್ಟಿಕೊಂಡ ಈ ಬ್ಯಾಡ್ಮಿಂಟನ್ ಆಟದ ಚಟ ಅವರಲ್ಲಿ ಈಗಲೂ ಮುಂದುವರೆದಿದೆ. ಅರಣ್ಯ ಇಲಾಖೆಯವರ ವನ ವಿಭಾಗದ 45 ವರ್ಷ ಮೇಲ್ಪಟ್ಟವರ ಕ್ರೀಡಾಕೂಟದಲ್ಲಿ 2016 ಶಿರಸಿಯಲ್ಲಿ ನಡೆದ ಜೋನಲ್ ಮಟ್ಟದ ಸಿಂಗಲ್ಸ್ ನಲ್ಲಿ ಬೆಳ್ಳಿ, ಡಬಲ್ಸ್ ನಲ್ಲಿ ಬಂಗಾರ, ಮಿಕ್ಸ್ ಡಬಲ್ಸ್ ನಲ್ಲಿ ಬೆಳ್ಳಿ, 2017 ಬೆಂಗಳೂರಿನಲ್ಲಿ ಕ್ರೀಡಾಕೂಟದಲ್ಲಿ ಸಿಂಗಲ್ಸ್ ನಲ್ಲಿ ಬೆಳ್ಳಿ, ಡಬಲ್ಸ್ ನಲ್ಲಿ ಬಂಗಾರ, ಮಿಕ್ಸ್ ಡಬಲ್ಸ್ ನಲ್ಲಿ ಬೆಳ್ಳಿ, 2018 ಬೆಳಗಾವಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಿಂಗಲ್ಸ್ ನಲ್ಲಿ ಕಂಚು, ಡಬಲ್ಸ್ ನಲ್ಲಿ ಬಂಗಾರ, ಮಿಕ್ಸ್ ಡಬಲ್ಸ್ ನಲ್ಲಿ ಬೆಳ್ಳಿ, 2019 ಧಾರವಾಡದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಿಂಗಲ್ಸ್ ನಲ್ಲಿ ಕಂಚು, ಡಬಲ್ಸ್ ನಲ್ಲಿ ಬಂಗಾರ, ಮಿಕ್ಸ್ ಡಬಲ್ಸ್ ನಲ್ಲಿ ಬಂಗಾರ, ಇದೇ ವರ್ಷ ಓಡಿಶಾದ ಬುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಿಸಿಎಪ್ ಯತೀಶಕುಮಾರ ಜೊತೆಯಾಗಿ ಆಡಿದ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಬ್ರಾಂಜ್ ಮೆಡಲನ್ನು ಪಡೆದು ಸಾಧನೆ ಮಾಡಿದ್ದಾರೆ.
2020 ರಿಂದ 22ರವರೆಗೆ ಕೋವಿಡ್ ಕಾರಣಕ್ಕೆ ಅರಣ್ಯ ಇಲಾಖೆಯ ಎಲ್ಲ ಕ್ರೀಡಾಕೂಟಗಳನ್ನು ರದ್ದುಪಡಿಸಲಾಗಿತ್ತು. ಕಾಲೇಜು ದಿನಗಳಿಂದಲೂ ಕಾಲೇಜು ಕ್ರೀಡಾಕೂಟ, ಸ್ಥಳೀಯ ಗಣೇಶ ಚತುರ್ಥಿ ಸಂಘಟನೆಗಳು ಹಾಗೂ ವಿವಿಧ ಕ್ರೀಡಾ ಸಂಘಟನೆಗಳು ಹಮ್ಮಿಕೊಂಡಿರುವ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪದಕದ ಜೊತೆಗೆ ಜಿಲ್ಲಾಮಟ್ಟದ ತಾಲೂಕ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಾವೇಶ್ವರ ಪಾಟೀಲ್ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಕೋಟ್…
ನಿರಂತರವಾಗಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕೆ ಈ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಪ್ರಾಥಮಿಕ ಕಾಯಿಲೆಗಳಿಲ್ಲದೆ ಆರಾಮವಾಗಿದ್ದೇನೆ. 45- 50 ವರ್ಷದ ನಂತರ ಹೆಚ್ಚು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುವ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯವಾಗಿರಬೇಕು.–ಭಾವೇಶ್ವರ ಪಾಟೀಲ್, ಬ್ಯಾಡ್ಮಿಂಟನ್ ಪಟು