ಕಾರವಾರ: ನೌಕಾನೆಲೆ ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನ ಮತ್ತು ಇತರ ಕಾನೂನುಬದ್ದ ಸವಲತ್ತಿಗಾಗಿ ಒತ್ತಾಯಿಸಿ ಸೀಬರ್ಡ್ ಡ್ರೈವರ್ಸ್ ಮತ್ತು ವರ್ಕರ್ಸ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಗುತ್ತಿಗೆ ಕಾರ್ಮಿಕರೊಡನೆ ಅರಗಾ ಹಾಗೂ ಸಂಕ್ರುಭಾಗ್ ಸೀಬರ್ಡ್ ಗೇಟ್ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ನೂರಾರು ಗುತ್ತಿಗೆ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುಮಾರು ಎರಡು ಘಂಟೆಗಳ ಕಾಲ ಸೀಬರ್ಡ್ ಪ್ರವೇಶ ದ್ವಾರವನ್ನು ಬಂದ್ ಮಾಡಿಸಿದರು. ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ಸ್ಥಳೀಯ ನಿರಾಶ್ರಿತ ಮತ್ತು ಇತರರು ಗುತ್ತಿಗೆದಾರರ ದಬ್ಬಾಳಿಕೆಯನ್ನು ಪ್ರತಿಭಟನೆ ಮೂಲಕ ಖಂಡಿಸಿದರು. ಗುತ್ತಿಗೆ ಕೆಲಸಗಾರರಿಗೆ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯ ಸುತ್ತೋಲೆ ಪ್ರಕಾರ ಕನಿಷ್ಠ ವೇತನ ನೀಡಬೇಕಾಗಿದ್ದು ಕೆಲವು ಗುತ್ತಿಗೆದಾರರು ರಾಜ್ಯ ಸರಕಾರದ ಕನಿಷ್ಠ ವೇತನ ನೀಡಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆ.
8 ತಾಸು ಕೆಲಸದ ಬದಲು 12 ಘಂಟೆ ದುಡಿಸಿಕೊಂಡು 8 ತಾಸು ದುಡಿತದ ಕೂಲಿ ನೀಡುತ್ತಿದ್ದರು. ಕಾನೂನು ಬದ್ದವಾಗಿ ನೀಡಬೇಕಾಗಿದ್ದ ಪಿಎಫ್ ಮತ್ತು ಇಎಸ್ಐ ನೀಡದೇ ಕಾರ್ಮಿಕರ ಬದುಕಿಗೇ ಮಾರಕವಾಗಿ ವರ್ತಿಸುತ್ತಿದ್ದರು. ಹೊರ ರಾಜ್ಯಗಳಿಂದ ಸರಕು ಸಾಗಾಣೆ ವಾಹನ ತಂದು ಮತ್ತು ಅದಕ್ಕೆ ಹೊರ ರಾಜ್ಯದ ಡ್ರೈವರ್ಗಳನ್ನೇ ನೇಮಕ ಮಾಡಿಕೊಳ್ಳುತ್ತಿದ್ದರು. ಈ ಎಲ್ಲಾ ಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ಯಾರಾದರೂ ವಿರೋಧಿಸಿದರೆ ಅಂತಹ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದ್ದರು.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಯೂನಿಯನ್ ಅಧ್ಯಕ್ಷ ಸತೀಶ್ ಸೈಲ್ ಮತ್ತು ಯೂನಿಯನ್ ಕಾನೂನು ಸಲಹೆಗಾರ ಕೆ.ಶಂಭು ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮತ್ತು ಇತರ ಯೂನಿಯನ್ ಪದಾಧಿಕಾರಿಗಳ ಹಾಗೂ ಕಾರ್ಮಿಕರ ತೀವ್ರ ಪ್ರತಿಭಟನೆಗೆ ಮಣಿದ ಗುತ್ತಿಗೆದಾರ ಕಂಪೆನಿಗಳಾದ ಎಲ್ & ಟಿ, ಶಾಪೂರ್ಜಿ, ನವಯುಗ, ಬಾಲಾಜಿ, ಜಿ.ಸೆಕ್ಯೂರಿಟಿ, ಎನ್ ಸಿ ಸಿ ಕಂಪನಿಗಳ ಮುಖ್ಯಸ್ಥರು ಸ್ಥಳದಲ್ಲಿಯೇ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಯೂನಿಯನ್ ಪದಾಧಿಕಾರಿಗಳೊಡನೆ ಸಂಧಾನ ಸಭೆ ನಡೆಸಿ ಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಕಾನೂನು ಪ್ರಕಾರ ಸಿಗಬೇಕಾಗಿರುವ ಸವಲತ್ತುಗಳನ್ನು ಗುತ್ತಿಗೆದಾರರು ನೀಡುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.