ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಪಂಚಾಯಿತಿ ವ್ಯಾಪ್ತಿಯ ಕಣ್ಣಿಗೇರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀಕಾಂತ ವೈದ್ಯ ಅವರನ್ನು ಬೇರೆ ಕಡೆ ಡೆಪ್ಯೂಟೇಷನ್ ಮೇಲೆ ವರ್ಗಾಯಿಸದಂತೆ ಗ್ರಾಮಸ್ಥರು ಸೋಮವಾರ ಶಾಲೆಯನ್ನು ಮುಚ್ಚಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ದಕ್ಷ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ಶ್ರೀಕಾಂತ್ ವೈದ್ಯ, ಶಾಲೆ ಹಾಗೂ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದವರು. ಇತ್ತೀಚೆಗೆ ಅವರನ್ನು ಸಮೀಪದ ತೆಂಗಿನಕೆರೆ ಶಾಲೆಗೆ ಪ್ರಭಾರಿ ಶಿಕ್ಷಕರಾಗಿ ನಿಯುಕ್ತಿಗೊಳಿಸಲಾಗಿತ್ತು. ನಮ್ಮ ಕಣ್ಣಿಗೇರಿ ಶಾಲೆಗೆ ಶ್ರೀಕಾಂತ ವೈದ್ಯ ಶಿಕ್ಷಕ ಬೇಕು ಎಂದು ಒತ್ತಾಯಿಸಿ ಮಹಿಳೆಯರು ಸೇರಿದಂತೆ ಅತಿ ಹೆಚ್ಚಿನ ಸಂಖ್ಯೆಯ ಜನ ಶಾಲೆಯಲ್ಲಿ ಸೇರಿ ಸೋಮವಾರ ಮಕ್ಕಳನ್ನು ಶಾಲೆಗೆ ಕಳಿಸದೇ ಪ್ರತಿಭಟಿಸಿದರು.
ಸಂಜೆ ಉದ್ಯಮಿ ಹಾಗೂ ಕಣ್ಣಿಗೇರಿ ಭಾಗದ ಮುಖಂಡ ಬಾಲಕೃಷ್ಣ ನಾಯಕ ಅವರ ಕಛೇರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಅರುಹಿದರು. ಈ ಕುರಿತು ಬಾಲಕೃಷ್ಣ ನಾಯಕ ಸಚಿವ ಶಿವರಾಮ್ ಹೆಬ್ಬಾರ್ ಜೊತೆ ಮಾತನಾಡಿ, ಸಚಿವರ ಆಪ್ತ ಸಹಾಯಕರಾದ ಕಮಲಾಕರ ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಗ್ರಾಮಸ್ಥರಿಂದ ಮನವಿ ಪಡೆದು ಕೂಡಲೆ ಬಿಇಓ ಎನ್ ಆರ್ ಹೆಗಡೆ ಸಂಪರ್ಕಿಸಿ ತೆಂಗಿನಗೇರಿ ಶಾಲೆಗೆ ನಿಯೋಜನೆಗೊಂಡ ಶಿಕ್ಷಕರನ್ನು ಮರಳಿ ಕಣ್ಣಿಗೇರಿ ಶಾಲೆಗೆ ನಿಯೂಕ್ತಿಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ 40 ವಿದ್ಯಾರ್ಥಿಗಳಿಗೆ ಉದ್ಯಮಿ ಬಾಲಕೃಷ್ಣ ನಾಯಕ್ ಉಚಿತವಾಗಿ ಪಟ್ಟಿಗಳನ್ನು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಣ್ಣಿಗೇರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನೀಲಕಂಠ ಬೋವಿವಡ್ಡರ್, ಮಾಜಿ ತಾ.ಪಂ ಅಧ್ಯಕ್ಷ ವಾಸುದೇವ ಮಾಪ್ಸೇಕರ, ಎಸ್ಡಿಎಂಸಿ ಸದಸ್ಯರಾದ ಗೀತಾ ಆರ್ ಸಿಂಗ್, ಉಮಾ ಮರಾಠಿ, ಶ್ರುತಿ ಮರಾಠಿ, ನೇತ್ರಾವತಿ ಬಾಂದೆಕರ್ ಶೈಲಜಾ ಸಿದ್ದಿ, ವೈಷ್ಣವಿ ನಾಯಕ, ರೂಪಾ ಸಿದ್ದಿ, ನೇತ್ರಾವತಿ ನಾಯ್ಕ, ಸುಮತಿ ಗುತ್ತಲಕರ್, ಬಾಬುಲಾಲ್ ತಮ್ಮಯ್ಯನ ಕಾಮೇಶ್ವರ ಮಾಪ್ಸೇಕರ ಸೇರಿದಂತೆ ಐವತ್ತಕ್ಕೂ ಹೆಚ್ಚು ಗ್ರಾಮಸ್ಥರಿದ್ದರು.