ಕಾರವಾರ:ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಂದ ಬ್ಯಾಂಕ್ ಲೋನ್‌ಗಾಗಿ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಯೋಜನೆಗಳಲ್ಲಿ ಬ್ಯಾಂಕ್ ಲೋನ್‌ಗಾಗಿ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ನಕಲಿ ಅಥವಾ ಸೂಕ್ತ ದಾಖಲೆ ಸಲ್ಲಿಸದ ಅರ್ಜಿಯನ್ನು ತಿರಸ್ಕರಿಸಿ ಸೂಕ್ತ ದಾಖಲೆ ಸಲ್ಲಿಸಿದ ಅರ್ಜಿದಾರರಿಗೆ ಯೋಜನೆಯ ಲಾಭವನ್ನು ತಲುಪಿಸಬೇಕೆಂದು. ಹೇಳಿದರು.
ಲೋನ್‌ಗಾಗಿ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅರ್ಜಿ ಸ್ವೀಕೃತ ಅಥವಾ ತಿರಸ್ಕೃತವಾದ ಕುರಿತು ಅರ್ಜಿದಾರರ ಗಮನಕ್ಕೆ ತರಬೇಕು. ಅರ್ಜಿಯನ್ನು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ತಿಳಿಸಬೇಕು. ಸ್ವೀಕೃತವಾಗಿದ್ದರೆ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಒಮ್ಮೆ ಸಲ್ಲಿಸಿದ ಅರ್ಜಿಯು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ತಿಳಿಸಿದ ನಂತರವೂ ಅದೇ ತರಹದ ಅರ್ಜಿಯನ್ನು ಪುನಃ ಸಲ್ಲಿಸಿದಾಗ ಈ ಹಿಂದಿನ ಅಗತ್ಯತೆಗಳನ್ನು ಪೂರೈಸಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಇಲಾಖಾ ಹಂತದಲ್ಲಿಯೇ ಅಧಿಕಾರಿಗಳು ಅವುಗಳನ್ನು ತಿರಸ್ಕರಿಸುವ ಕಾರ್ಯವಾಗಬೇಕು ಇದರಿಂದ ಬ್ಯಾಂಕ್ ಗಳ ಸಮಯ ಉಳಿತಾಯವಾಗಲಿದ್ದು, ಸೂಕ್ತ ದಾಖಲೆ ಸಲ್ಲಿಸಿದ ಅರ್ಜಿದಾರರಿಗೆ ಲೋನ್ ಅನುಮೋದನೆ ಮಾಡಲು ಅನುಕೂಲವಾಗುತ್ತದೆ ಎಂದು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಬ್ಯಾಂಕ್ ಅಧಿಕಾರಿಗಳು ಪಿ.ಎಮ್.ಜಿ.ಎಸ್.ಡಿ.ವೈ, ಪಿ.ಎಮ್.ಜೆ.ಜೆ.ಬಿ.ವಾಯ್, ಪಿ.ಎಮ್.ಎಸ್.ಬಿ.ವಾಯ್ ಎನ್ರೋಲ್ಮೆಂಟ್ಸ್ನ ನೈಜ ಅಂಕಿಸಂಖ್ಯೆಗಳನ್ನು ನೀಡಬೇಕು. ಫಂಡ್ ಕುರಿತಾಗಿ ಖಚಿತ ಮಾಹಿತಿ ಒದಗಿಸಬೇಕು. ಸರಕಾರಿ ಕಾರ್ಯಕ್ರಮ, ಯೋಜನೆಗಳನ್ನು ತಿಳಿಸುವ ಕಾರ್ಯವಾಗಬೇಕು. ಅದರಲ್ಲಿ ಬ್ಯಾಂಕ್‌ಗಳ ಭಾಗವಹಿಸುವಿಕೆ ಹೇಗಿದೆ ಎಂಬುದನ್ನು ತಿಳಿಸಬೇಕು. ಸಾರ್ವಜನಿಕರಿಗೆ ಅಗತ್ಯ ಮಾಹಿತಿ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು. ಆಧಾರ್ ಸೀಡಿಂಗ್ ಕಾರ್ಯವನ್ನು ಮಾಡಿಲ್ಲವೆಂದು ಕಾರಣ ತಿಳಿಸದೇ ಆಧಾರ್ ಸೀಡ್ ಮಾಡಿ ಯೋಜನೆಯ ಅನುಷ್ಠಾನಗೊಳಿಸಲು ಶ್ರಮವಹಿಸಬೇಕೆಂದರು.
ವಿವಿಧ ಇಲಾಖೆಗಳ ಮೂಲಕ ಸಲ್ಲಿಸಲಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಸರಕಾರಿ ಯೋಜನೆಯ ಲಾಭ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಸ್ವ ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಹೇಳಿದರು. ನರೇಗಾ ಹಾಗೂ ವಿವಿಧ ಇಲಾಖಾ ಯೋಜನೆಯಲ್ಲಿ ಸಬ್ಸಿಡಿ, ವೇತನ ಸಲ್ಲಿಕೆಯಾಗುವ ರೀತಿಯಲ್ಲಿ ಗಮನವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಿವಿಧ ತರಬೇತಿಗಳ ಕುರಿತು ಆರ್‌ಸೆಟಿಯಲ್ಲಿನ ಪ್ರಗತಿ ಕುರಿತು ವರದಿಯನ್ನ ತಿಳಿಸುವ ಕಾರ್ಯವಾಗಬೇಕು ಇದನ್ನು ಮಾಡಿದಮೇಲೆಯೇ ಆರ್ಥಿಕ ವರ್ಷದ ಚಟುವಟಿಕೆಯನ್ನು ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಆರ್ಬಿಐ ಅಸಿಸ್ಟೆಂಟ್ (ಬೆಂಗಳೂರು) ಜನರಲ್ ಮ್ಯಾನೇಜರ್ ಜಿ. ವೆಂಕಟೇಶ,ಕಾರವಾರ ಪ್ರಾದೇಶಿಕ ಕೆನರಾ ಬ್ಯಾಂಕ್ ಮ್ಯಾನೇಜರ್ ನಂದಕಿಶೋರ್ ಗುರುದಾಸ್ ಕಾಸ್ಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.