ಶಿರಸಿ : ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಳೆಗನ್ನಡದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಕನ್ನಡವು ಬದಿಗೊತ್ತಲ್ಪಡುತ್ತಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕರು ಹಾಗೂ ಲೇಖಕರಾದ ವಿಜಯನಳನಿ ರಮೇಶ್ ಹೇಳಿದರು.
ಮೇ 30 ರಂದು ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲ್ಪಟ್ಟ ಹಳೆ ಕನ್ನಡದಲ್ಲಿ ಪಂಪ ಕಾವ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳೆಗನ್ನಡದ ಸ್ಥಿತಿ ಇಂದು ದುಸ್ಥಿತಿಯಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಕನ್ನಡ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಹಳೆಗನ್ನಡದ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಮ್ಮೆಯ ಸಂಗತಿ . ಹಳೆಗನ್ನಡಕ್ಕೆ ಆದಿಕವಿ ಪಂಪನ ಕೊಡುಗೆ ಅಪಾರವಾದದ್ದು ,ವ್ಯಾಸರ ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ತಂದ ಗರಿಮೆ ಪಂಪನದ್ದು.ಚಿಕ್ಕ ಚಿಕ್ಕ ಪದ್ಯಗಳ ಮೂಲಕ ಪಾತ್ರದರ್ಶನ ಮಾಡಿಸುತ್ತಾರೆ.ಮಹಾಭಾರತದಲ್ಲಿ ಕರ್ಣನ ಪ್ರತಿಜ್ಞೆ ಹಾಗೂ ಭೀಷ್ಮನ ಯುದ್ದಪ್ರತಿಷ್ಠೆಯ ವರ್ಣನೆ ಇವರ ಉತ್ಕೃಷ್ಟ ಕಾವ್ಯಗಳಿಗೆ ಸಾಕ್ಷಿ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಟಿ ಎಸ್ ಹಳೆಮನೆ ಮಾತನಾಡಿ ಕನ್ನಡವು ಒಂದು ಪ್ರಾಚೀನ ಭಾಷೆಯಾಗಿದ್ದು ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ ಇರಬೇಕು. ನೆಲ ಜಲದ ವಿಷಯ ಬಂದಾಗ ನಾವೆಲ್ಲರೂ ಒಂದಾಗಿರಬೇಕು.ಗಡಿಯ ವಿಷಯ ಬಂದಾಗ ಮಹಾಜನ್ ವರದಿಯೇ ಅಂತಿಮವಾಗಿರಬೇಕು.ನಮ್ಮ ಒಂದು ಇಂಚು ನೆಲವು ಬೇರೆಡೆಗೆ ಸೇರಕೂಡದು ಎಂದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಭಕ್ಕಳ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕನ್ನಡದ ಆಸಕ್ತಿ ಹೆಚ್ಚಿಸುವ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಹಮ್ಮಿಕೊಳ್ಳಲಾಗುತ್ತಿದ್ದು ಈ ಮುಖಾಂತರ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿರಸಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ವಿ.ಆರ್ ಹೆಗಡೆ ಮತ್ತಿಘಟ್ಟ, ಕೃಷ್ಣ ಪದಕಿ, ಮಹಾದೇವ ಚಲವಾದಿ, ಶ್ರೀನಿವಾಸ ನಾಯ್ಕ, ವಿಮಲಾ ಭಾಗ್ವತ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ರಾಜು ಹೆಗಡೆ ಮುಂತಾದವರು ಉಪಸ್ಥಿತರಿದ್ದರು.