ಅಂಕೋಲಾ; ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡು ಮಾಡಿದ ಕೆಲಸಗಳು ಖಂಡಿತವಾಗಿಯೂ ಒಳ್ಳೆಯ ಫಲವನ್ನೇ ಕೊಡುತ್ತದೆ ಎಂಬುದಕ್ಕೆ ಅಂಕೋಲಾ ಮಾವಿನ ಮೇಳವೇ ಸಾಕ್ಷಿಯಾಗಿದೆ. ಇದೇ ತಿಂಗಳು 21 ಮತ್ತು 22 ರಂದು ಅಂಕೋಲಾ ಬೆಳೆಗಾರರ ಸಮಿತಿಯವರು ಮ್ಯಾಂಗೋ ಮೇಳವನ್ನು ಆಯೋಜಿಸಿದ್ದರು. ಅಪಾರ ಪ್ರಮಾಣದಲ್ಲಿ ಮಾವು ವ್ಯಾಪಾರವಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಸಂತೋಷವಾಗಿತ್ತು. ಅಷ್ಟೇ ಅಲ್ಲದೇ ರಾಜ್ಯಾದಂತ ಗಮನ ಸೆಳೆದಿತ್ತು.
ವಿಧಾನ ಸಭೆಯ ಘನತೆವೆತ್ತ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವರಾದ ಶ್ರೀಪಾದ ನಾಯ್ಕ್ ಮತ್ತು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾವು ಮೇಳವನ್ನು ಕೊಂಡಾಡಿದ್ದರು.
ಮಾವು ಮೇಳವಾದ ನಂತರ ಅನೇಕ ರೈತರಿಗೆ ಕೆಲವು ಗ್ರಾಹಕರು ನೇರವಾಗಿ ಸಂಪರ್ಕಿಸಿ ಅವರ ಮನೆಗೇ ಬಂದು ಮಾವನ್ನು ಒಯ್ದ ಸುದ್ದಿ ಬರುತ್ತಿದೆ. ಮುಂದಿನ ವರ್ಷವೂ ಬರುತ್ತೇವೆ, ನಮಗೆ ಮಾವು ಕಾದಿಡಿ ಎಂದು ಹೇಳಿಯೂ ಹೋಗಿದ್ದಾರೆ.ಇದಕ್ಕಿಂತ ಅಚ್ಚರಿಯ ಸಂಗತಿಯೆಂದರೆ ಅಂಕೋಲಾ ಮಾವಿಗೆ ದೂರದ ಗ್ಯಾಂಗ್ಟಕ್ ನಿಂದ ಬೇಡಿಕೆ ಬಂದಿದ್ದು. ಮಾವುಮೇಳದಲ್ಲಿ ಭಾಗವಹಿಸಿದ ಬೆಂಗಳೂರಿನ ಡಾಕ್ಟರ್ ನಂದಿನಿ. ಡಿ ರವರು ತಮ್ಮ ಇನ್ಸ್ಟಾಗ್ರಾಮದಲ್ಲಿ ಅಂಕೋಲೆಯ ಈಶಾಡ ಮಾವಿನ ಬಗ್ಗೆ ಬರೆದಿದ್ದರು.
ಇದನ್ನು ನೋಡಿದ ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್ ನಿವಾಸಿ ಡಾಕ್ಟರ್ ಬಿನು ಥೋಮಸ ಎನ್ನುವವರು ಬೆಳಂಬಾರದ ಮಹಾದೇವ ಗೌಡರಿಗೆ ಸಂಪರ್ಕಿಸಿ ಈಶಾಡ ಮಾವಿನ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣವೇ ಸ್ಪಂದಿಸಿದ ಮಹಾದೇವ ಗೌಡರು ಸಿಕ್ಕಿಂ ಗೆ ಪೋಸ್ಟ್ ಮುಖಾಂತರ ಈಷಾಡ ಮಾವಿನ ಕಾಯಿ ಕಳುಹಿಸಿದರು. ಮಾವಿನ ಮೇಳದಿಂದ ಈಷಾಡ ಮಾವು ಅಂಕೋಲಾ ಮತ್ತು ಸಿಕ್ಕಿಂ ನಡುವೆ ಒಂದು ನಂಟನ್ನು ಬೆಳೆಸಿತು.ಸಿಕ್ಕಿಂ ಮುಟ್ಟಲು ಕನಿಷ್ಠ 6 ದಿನ ಹಿಡಿಯಲಿದ್ದು ಅಲ್ಲಿಯವರೆಗೆ ಅದು ಹಣ್ಣಾಗುತ್ತದೆ. ಅಂತೂ ಅಂಕೋಲಾ ಬೆಳೆಗಾರರ ಸಮಿತಿಯವರು ಅಂಕೋಲಾದಲ್ಲಿ ಹಚ್ಚಿದ ಒಂದು ಸಣ್ಣ ದೀಪ ದೂರದ ಸಿಕ್ಕಿಂನಲ್ಲಿ ಬೆಳಕಾಗಿ ತೋರುತ್ತದೆ ಎಂದರೆ ಸಂತೋಷದ ಜೊತೆಗೆ ಹೆಮ್ಮೆ ಮೂಡಿಸುತ್ತದೆ.