ಹೊನ್ನಾವರ: ಈಗ ಮೀನುಗಾರಿಕೆಗೆ ಬಿಡುವಿನ ಸಮಯ, ಮಳೆ ಅಬ್ಬರ ಕಡಿಮೆಯಾದ ಮೇಲೆ ನಾಡದೋಣಿ ನೀರಿಗಿಳಿದರೆ, ಒಂದೂವರೆ ತಿಂಗಳ ನಂತರ ಯಾಂತ್ರೀಕೃತ ಬೋಟ್‌ಗಳು ಕಡಲಿಗಿಳಿಯಲಿವೆ. ಮಳೆಗಾಲದ ವೇಳೆ ಮೀನುಗಾರಿಕೆಯೆಂದರೆ ಅಪಾಯಕಾರಿ, ರಾಜ್ಯ ಮೀನುಗಾರಿಕೆ ಇಲಾಖೆ ಮೀನುಗಾರರ ನೆರವಿಗೆ ಮರೈನ್ ಅಂಬ್ಯೂಲೆನ್ಸ್ ಒದಗಿಸುವ ಬಗ್ಗೆ ಭರವಸೆ ನೀಡಿದ್ದು, ಎರಡು ವರ್ಷವಾದ್ರೂ ಅದಿನ್ನೂ ಕಡತದಲ್ಲೇ ಉಳಿದುಕೊಂಡಿದೆ.
ಸಮುದ್ರದಲ್ಲಿ ಮೀನುಗಾರಿಕೆ ಸಂದರ್ಭ ಅವಘಡಗಳುಂಟಾದರೆ ಜೀವರಕ್ಷಣೆಗೆ ನೆರವಾಗುವ ಮರೈನ್ ಆ್ಯಂಬುಲೆನ್ಸ್ ಪ್ರಸ್ತಾವನೆ ಮೀನುಗಾರಿಕೆ ಇಲಾಖೆ ಮಾಡಿದ್ದು, ಅದಿನ್ನೂ ಹಾಗೆಯೇ ಇದೆ. ಕೇರಳದ ಮೀನುಗಾರಿಕೆ ಇಲಾಖೆ ದೇಶದ ಮೊದಲ ಮರೈನ್ ಅಂಬ್ಯೂಲೆನ್ಸ್ ವ್ಯವಸ್ಥೆ ಜಾರಿಯಲ್ಲಿ ತಂದಿತ್ತು. ಪಕ್ಕದ ರಾಜ್ಯ ಮೀನುಗಾರರಿಗೆ ನೆರವಾಗಲು ಮುಂದಾಗಿರುವುದನ್ನು ನೋಡಿದ ನಮ್ಮರಾಜ್ಯದ ಮೀನುಗಾರರು ತಮಗೂ ಇಂತಹ ವ್ಯವಸ್ಥೆ ಕಲ್ಪಿಸಿ ಎಂದಿದ್ದರು. ಸಮುದ್ರದಲ್ಲಿ ತುರ್ತಾಗಿ ಜೀವ ಉಳಿಸಲು ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಬೋಟ್ ಇದಾಗಿದ್ದು, ಏಕಕಾಲದಲ್ಲಿ ಸುಮಾರು 10 ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯೊಂದಿಗೆ ಈಜುಗಾರರು, ತಜ್ಞ ವೈದ್ಯರು, ಆರೋಗ್ಯ ಸಿಬ್ಬಂದಿ ಮೊದಲಾದ ವ್ಯವಸ್ಥೆ ಹೊಂದಿರುತ್ತವೆ.
ಪ್ರಸ್ತುತ ಮೀನುಗಾರಿಕಾ ಬೋಟ್‌ಗಳು ತೊಂದರೆಗೆ ಸಿಲುಕಿದಾಗ ಸಮೀಪದ ಬೋಟ್‌ಗಳು ರಕ್ಷಣೆಗೆ ಧಾವಿಸಬೇಕಾಗುತ್ತದೆ. ಆದರೆ ಬೋಟ್‌ಗಳು ತಕ್ಷಣಕ್ಕೆ ಧಾವಿಸಲು ಅಸಾಧ್ಯವಾಗುತ್ತದೆ. ಹಲವು ಬಾರಿ ಅವಘಡಕ್ಕೀಡಾದಾಗ ಮೀನುಗಾರರನ್ನು ರಕ್ಷಿಸಿದರೂ ಪ್ರಥಮ ಚಿಕಿತ್ಸೆ ಸೌಲಭ್ಯವಿಲ್ಲದೇ ಪ್ರಾಣಕ್ಕೆ ಕುತ್ತು ಆಗಿರುವ ಸಂದರ್ಭವೂ ಇದೆ. ಅಲ್ಲದೇ ಆಳ ಸಮುದ್ರದಲ್ಲಿ ತುರ್ತಾಗಿ ದಡಕ್ಕೆ ಸಾಗಿಸುವುದೂ ಕಷ್ಟವಾಗಿದೆ. ಹಾಲಿ ಸ್ಥಿತಿಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ಅಥವಾ ತಟ ರಕ್ಷಕ ದಳದವರು ನೆರವಿಗೆ ಆಗಮಿಸುತ್ತಿದ್ದರಾದರೂ ಚಿಕಿತ್ಸೆ ಸಿಗುತ್ತಿಲ್ಲ.ಆದ್ದರಿಂದ ಆದಷ್ಟು ಬೇಗ ಮರೈನ್ ಆಂಬುಲೆನ್ಸ್ ಮೀನುಗಾರರ ಉಪಯೋಗಕ್ಕೆ ಬರುವಂತಾಗಬೇಕೆಂದು ಮೀನುಗಾರರು ಆಶಿಸಿದ್ದಾರೆ.