ಕುಮಟಾ: ಕೋವಿಡ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ನೀಡುತ್ತಿದ್ದ ಅರ್ಧ ಸಂಬಳವನ್ನು ಇನ್ನೂ ಮುಂದುವರೆಸಿದ್ದು, ಸಾರಿಗೆ ಸಂಸ್ಥೆ ಆದಾಯ ಸುಸ್ಥಿತಿಗೆ ಬಂದಿದ್ದರೂ ಇನ್ನೂ ಪೂರ್ಣ ಸಂಬಳ ಪಡೆಯಲು ಸಾರಿಗೆ ಸಿಬ್ಬಂದಿಗಳು ಪರದಾಟ ನಡೆಸುವಂತಾಗಿದೆ. ಈಗಾಗಲೆ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತಿದ್ದು, ದಿನನಿತ್ಯದ ಜೀವನ ನಿರ್ವಹಣೆಯೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ ಸರಿದೂಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವಂತಾಗಿದೆ.
ಕೋವಿಡ್ ಕಾರಣದಿಂದ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರಿಗೆ ಸಂಸ್ಥೆಗೆ ಆದಾಯವೇ ಇದ್ದಿರಲಿಲ್ಲ. ಕಾರಣದಿಂದಾಗಿ ಸಿಬ್ಬಂದಿಗಳಿಗೂ ವೇತನ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾದಿಂದ ಸಂಪೂರ್ಣ ಅನ್ ಲಾಕ್ ಆಗಿರುವದರಿಂದ ಸಾರಿಗೆ ಸಂಸ್ಥೆ ಬಸ್ ಸಂಚಾರ ಈ ಹಿಂದಿನಂತೆ ಪ್ರಾರಂಭವಾಗಿ ಸಂಸ್ಥೆಗೆ ಆದಾಯವೂ ಬರುತ್ತಿದೆ. ಸಂಸ್ಥೆಗೆ ಸಿಬ್ಬಂದಿಗಳು ಈ ಹಿಂದಿನಂತೆ ಕರ್ತವ್ಯಕ್ಕೆ ಮರಳಿ ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಆದರೆ ಪೂರ್ತಿ ಸಂಬಳ ಎನ್ನುವುದು ಮಾತ್ರ ಈ ಸಿಬ್ಬಂದಿಗಳಿಗೆ ಗಗನ ಕುಸುಮವಾದಂತಾಗಿದೆ. ಕಳೆದ ವರ್ಷ ಕೋವಿಡ್ ಲಾಕ್ಡೌನ್ ಬಳಿಕ ಮತ್ತೆ ಸಾರಿಗೆ ಸಂಚಾರ ಆರಂಭವಾಗಿತ್ತಾದರೂ ಸಿಬ್ಬಂದಿಗಳಿಗೆ ವೇತನ ಇಲ್ಲವಾಗಿತ್ತು. ಆಗಸ್ಟ್ ಬಳಿಕ ಅರ್ಧ ಸಂಬಳ ನೀಡಲು ಪ್ರಾರಂಭಿಸಿದ್ದ ಸಾರಿಗೆ ಸಂಸ್ಥೆ ಇನ್ನೂ ಅದೇ ವ್ಯವಸ್ಥೆಯನ್ನು ಮುಂದುವರೆಸಿದೆ. ಆದರೆ ಸಂಸ್ಥೆಯ ಆದಾಯಕ್ಕೇನು ಕೊರತೆ ಉಂಟಾಗಿಲ್ಲ.
ಕಳೆದ ಮೇ ತಿಂಗಳ ಮಧ್ಯಾವಧಿಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ 6,14, 27,000 ರು. ಆದಾಯ ಬಂದಿದೆ. ಅದರಂತೆ ಉತ್ತರ ಕನ್ನಡ ವಿಭಾಗವೂ ಸಹ 61, 36, 446 ರು. ಆದಾಯ ಗಳಿಸಿದೆ. ಇದಲ್ಲದೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಂಟು ದಿನದ ಶಿರಸಿ ಜಾತ್ರಾಮಹೋತ್ಸವದ ಸಂದರ್ಭದಲ್ಲಿ 1,05, 70, 000 ರು ಆದಾಯ ಗಳಿಸಿತ್ತು. ಹೀಗೆ ದಿನದಿಂದ ದಿನಕ್ಕೆ ಆದಾಯ ಗಳಿಕೆಯಲ್ಲಿ ಪ್ರಗತಿ ಕಾಣುತ್ತಿದ್ದರೂ ಸಿಬ್ಬಂದಿಗಳಿಗೆ ಮಾತ್ರ ಏಕ ಕಾಲದಲ್ಲಿ ಪೂರ್ಣ ಪ್ರಮಾಣದ ಸಿಗುತ್ತಿಲ್ಲ. ಇದರಿಂದಾಗಿ ಸಿಬ್ಬಂದಿಗಳು ಸಂಬಳಕ್ಕಾಗಿ ಕೊರಗುವ ಸ್ಥಿತಿ ಉಂಟಾಗಿದೆ. ಮನೆಯ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಖರ್ಚುವೆಚ್ಚ ಸವಾಲಾಗಿ ಪರಿಣಮಿಸಿದೆ. ಅರ್ಧ ತಿಂಗಳ ಸಂಬಳ ನೀಡಿ ಇನ್ನರ್ಧ ತಿಂಗಳ ಸಂಬಳಕ್ಕೆ ಇನ್ನೊಂದು ತಿಂಗಳ ಪೂರ್ತಿ ಕಾಯಬೇಕಾದ ದುಸ್ಥಿತಿ ಉಂಟಾಗಿದೆ.